ಮೂಡುಬಿದಿರೆ: ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರದಂದು ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ನೂತನ ಕಚೇರಿಯನ್ನು ಉದ್ಘಾಟಿಸಿ, ಗ್ರಾಮೀಣ ಭಾಗದ ರೈತರಿಗೆ ಸಾಲದ ಹಣದ ಕೊರತೆ ಉಂಟಾದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಂಘದ ನೆರವಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸ್ತುತ ಕಲ್ಲಬೆಟ್ಟು ಸಹಕಾರಿ ಸಂಘದಿಂದ ವಿಭಜನೆಗೊಂಡು ಪ್ರತ್ಯೇಕ ಅಸ್ತಿತ್ವಕ್ಕೆ ಬಂದಿದ್ದು, ಸ್ಥಳೀಯ ಜನತೆಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಗಲಿದೆ. ಈ ಭಾಗದ ಎಲ್ಲಾ ರೈತರಿಗೆ ಕೃಷಿ ಸಾಲದ ಸೌಲಭ್ಯ ಲಭಿಸಬೇಕು. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಂಘ ಸದೃಢವಾಗಿ ಬೆಳೆಯಲಿ ಎಂದು ತಮ್ಮ ಆಶಯವನ್ನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಿರ್ತಾಡಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಪಡಿತರ ವಿಭಾಗವನ್ನು ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನವಮೈತ್ರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಹೊಸಬೆಟ್ಟು ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ನಿರ್ದೇಶಕ ಪದ್ಮಪ್ರಸಾದ್ ಜೈನ್, ಪೆರಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


