ಬೆಳ್ತಂಗಡಿ : ಕಾನೂನು ಮೀರಿ ಅನಧಿಕೃತ ಕಟ್ಟಡ ಕಾಮಗಾರಿ ಮಾಡುತ್ತಿರುವ ಗುರುವಾಯನಕೆರೆಯ ಹೆಸರಾಂತ ಹೊಟೇಲ್ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳಲು ಕುವೆಟ್ಟು ಪಂಚಾಯತ್ ಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಬಳಿ ಇರುವ ಪ್ರಕಾಶ್ ಶೆಣೈ ಎಂಬವರಿಗೆ ಸೇರಿದ ಹೆಸರಾಂತ ‘ಶೆಣೈ ರೆಸ್ಟೋರೆಂಟ್’ ಎಂಬ ಹೆಸರಿನ ಹೊಟೇಲ್ ಹಿಂಭಾಗದಲ್ಲಿ ಅನಧಿಕೃತವಾಗಿ ಹೊಸ ವಾಣಿಜ್ಯ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು. ಈ ಅನಧಿಕೃತ ಕಟ್ಟಡ ಕಾಮಗಾರಿ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಗೆ ಜ.23 ರಂದು ಸಾರ್ವಜನಿಕರು ದೂರು ನೀಡಿದ್ದಾರೆ.

ವಿಪರ್ಯಾಸವೆಂದರೆ ಈ ಹೆಸರಾಂತ ಗುರುವಾಯನಕೆರೆಯಲ್ಲಿರುವ ‘ ಶೆಣೈ ರೆಸ್ಟೋರೆಂಟ್ ‘ ಹೊಟೇಲ್ ಗೆ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಹೆಚ್ಚಾಗಿ ಊಟ ಮಾಡಲು ಹೋಗುತ್ತಿದ್ದರೂ ಅನಧಿಕೃತ ಎರಡು ಅಂತಸ್ತಿನ ಕಟ್ಟಡದ ಕಾಮಗಾರಿ ಕೆಲಸಗಳು ಕಣ್ಣಿಗೆ ಕಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವುದು ಮಾತ್ರ ಅಚ್ಚರಿ ತಂದಿದೆ.

ಬೆಳ್ತಂಗಡಿ ತಾಲೂಕಿನ ಹಲವೆಡೆ ಕಾನೂನು ಮೀರಿ ಪ್ರಭಾವಿಗಳು ರಾಜರೋಷವಾಗಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದು. ಇದಕ್ಕೆ ಅಧಿಕಾರಿಗಳು ಟೇಪ್ ಹಾಕಿ ಎಚ್ಚರಿಕೆ ನೀಡಿ ಸುಮ್ಮನಿರುತ್ತಾರೆ, ಅದನ್ನು ಮೀರಿ ಪ್ರಭಾವಿಗಳು ರಾತ್ರಿ ಸಮಯದಲ್ಲಿ ಕಾಮಗಾರಿ ಕೆಲಸ ಮಾಡುತ್ತಿದ್ದರೂ ಯಾವ ಕಾನೂನು ಕ್ರಮಕ್ಕೆ ಮುಂದಾಗದೆ ನಿದ್ದೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.



