ಉಡುಪಿಯಲ್ಲಿ ನವೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ “ಲಕ್ಷ ಕಂಠ ಗೀತಾ ಗಾಯನ” ಕಾರ್ಯಕ್ರಮವು ಅಧಿಕೃತವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಸಂಕಲ್ಪದಂತೆ, ಈ ಐತಿಹಾಸಿಕ ಕಾರ್ಯಕ್ರಮವು ನೆರವೇರಿದ್ದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥರಾದ ಡಾ. ಮನೀಶ್ ಕುಮಾರ್ ವಿಶ್ನೋಯ್ ಅವರು ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಹಾಗೂ ಪ್ರಸನ್ನ ಆಚಾರ್ಯ ಅವರ ಮುಂದಾಳತ್ವದಲ್ಲಿ ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯೋಜಿಸಲಾಗಿತ್ತು.
ಒಂದೇ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೀತೆಯನ್ನು ಏಕಕಂಠದಲ್ಲಿ ಪಠಿಸಿ ಗೀತಾ ಪಾರಾಯಣ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೀತೆಯ 15ನೇ ಪಾರಾಯಣವನ್ನು ಪಠಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮಹತ್ವ ಬಂದಿತು.


