ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಥಳದಲ್ಲಿ ತ್ಯಾಜ್ಯ ಎಸೆಯಲು ಮುಂದಾದ ವ್ಯಕ್ತಿಗೆ ಪಂಚಾಯತ್ ಮೂರು ಸಾವಿರ ರೂಪಾಯಿ ದಂಡ ಹಾಕಿದೆ.
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅಮೆಮಾರ್ ಎಂಬಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೋರ್ವರು ತಡರಾತ್ರಿ ತ್ಯಾಜ್ಯವನ್ನ ಎಸೆದಿದ್ದಾರೆ.
ಪುದು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಮ್ಲಾನ್ ಮಾರಿಪಳ್ಳ ಅವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಥಮ ಸಭೆಯಲ್ಲೇ ನಿರ್ಣಯ ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಸಾವಿರ ರೂಪಾಯಿಯ ಬಹುಮಾನವನ್ನ ಕೂಡ ಘೋಷಿಸಿದ್ದರು.
ತಡರಾತ್ರಿ ವ್ಯಕ್ತಿಯು ಕಸವನ್ನ ಎಸೆಯಲು ಬಂದಾಗ ಅಲ್ಲೇ ಇದ್ದಂತಹ ವ್ಯಕ್ತಿಯೋರ್ವ ಕಸ ಎಸೆದವರ ಮಾಹಿತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ರವರಿಗೆ ತಿಳಿಸಿದ್ದರು.
ಅಧ್ಯಕ್ಷರು ಪೋಲಿಸರ ಸಹಕಾರದೊಂಸಾದಿಗೆ ಮಾಹಿತಿ ಕಲೆ ಹಾಕಿ ಅದರಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಸ್ಮೃತಿ ಯು ಅವರು ಕಸ ಎಸೆಯಲು ಬಂದವರಿಂದ 3,000 ರೂ. ದಂಡವನ್ನು ವಸೂಲಿ ಮಾಡಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ ಎಂದು ಪುದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.


