Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಯನ್ನು ಕಿಡ್ನ್ಯಾಪ್ ಮಾಡಿ 1.5 ಕೋ.ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಯನ್ನು ಕಿಡ್ನ್ಯಾಪ್ ಮಾಡಿ 1.5 ಕೋ.ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ

- Advertisement -
- Advertisement -

ಮಂಗಳೂರು: : ಜ್ಯುವೆಲ್ಲರಿ ಶಾಪ್ ನಿಂದ ಚಿನ್ನದ ಗಟ್ಟಿಯನ್ನು ಇನ್ನೊಂದು ಕಡೆ ತೆಗೆದುಕೊಂಡು ಹೋಗುವಾಗ ಅಂಗಡಿಯ ಸಿಬ್ಬಂದಿಯನ್ನು  ಅಪರಿಚಿತ ಗುಂಪೊಂದು ಕಿಡ್ನಾಪ್ ಮಾಡಿ ಸುಮಾರು 1.5 ಕೋ.ರೂ. ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಘಟನೆ ಶುಕ್ರವಾರ ಮಂಗಳೂರಿನಲ್ಲಿ ನಡೆದಿದೆ.


ಸೆಪ್ಟೆಂಬರ್ 26 ರ ರಾತ್ರಿ ಚಿನ್ನದ ಅಂಗಡಿಯಲ್ಲಿ ವಾರದಲ್ಲಿ ಕಲೆಕ್ಟ್ ಆದ ಸುಮಾರು 1.5 ಕೋ.ರೂ. ಮೌಲ್ಯದ 1,650 ಗ್ರಾಂ ತೂಕದ ಮೆಲ್ಟ್ ಮಾಡಿದ ಚಿನ್ನವನ್ನು ಶುದ್ಧ ಚಿನ್ನವಾಗಿ ಪರಿವರ್ತಿಸಲು ರಥಬೀದಿಯ ಸಂತೋಷ್‌ ಎಂಬವರ ಅಂಗಡಿಗೆ ಮುಸ್ತಾಫ ತನ್ನ ಸ್ಕೂಟರ್‌ನ ಸೀಟಿನ ಅಡಿಯ ಡಿಕ್ಕಿಯಲ್ಲಿ ಇಟ್ಟು ತೆಗೆದುಕೊಂಡು ಹೋಗಿದ್ದಾರೆ. ಜಿಎಚ್‌ಎಸ್‌ ರಸ್ತೆಯ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ತಲುಪಿದಾಗ ರಾತ್ರಿ ಸುಮಾರು 8.45ರ ವೇಳೆಗೆ ಹಿಂದಿನಿಂದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮುಸ್ತಾಫ ಅವರ ಸ್ಕೂಟರ್‌ಗೆ ಅಡ್ಡ ಇಟ್ಟು ನಮ್ಮ ವಾಹನಕ್ಕೆ ಯಾಕೆ ತಾಗಿಸಿಕೊಂಡು ಹೋಗುತ್ತೀ ಎಂದು ಬ್ಯಾರಿ ಭಾಷೆಯಲ್ಲಿ ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ ಮುಸ್ತಾಫ ಅವರು ಗಾಬರಿಗೊಂಡಿದ್ದು, ಈ ವೇಳೆ ಹಿಂದಿನಿಂದ ಬಿಳಿ ಬಣ್ಣದ ಕಾರಿನಲ್ಲಿ ಬಂದ ನಾಲ್ವರ ಪೈಕಿ ಒಬ್ಬ ಕಾರಿನಿಂದ ಇಳಿದು, ಅವರ ಪ್ಯಾಂಟನ್ನು ಎಳೆದಿದ್ದು, ಆಗ ಮೊಬೈಲ್‌ ಕೆಳಗ್ಗೆ ಬಿದ್ದಿದೆ. ಬಳಿಕ ಆತ ಕತ್ತಿಯನ್ನು ತೋರಿಸಿ ಬೆದರಿಸಿದ್ದಾನೆ. ಅನಂತರ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರ ಪೈಕಿ ಹಿಂಬದಿ ಸವಾರ ಅವರ ಕೆಳಗೆ ಬಿದ್ದಿದ್ದ ಮೊಬೈಲ್‌ ತೆಗೆದುಕೊಂಡು ಮುಸ್ತಫಾ ಅವರ ಸ್ಕೂಟರ್‌ನಲ್ಲೇ ಕಾರನ್ನು ಹಿಂಬಾಲಿಸಿದ್ದಾನೆ.ದಾರಿ ಮಧ್ಯದಲ್ಲಿ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಸ್ಟೇಟ್‌ಬ್ಯಾಂಕ್‌, ಪಾಂಡೇಶ್ವರ ಮಾರ್ಗವಾಗಿ ಗೋರಿಗುಡ್ಡ, ಉಜ್ಜೋಡಿ ಫ್ಲೈ ಓವರ್‌ ರಸ್ತೆಯ ಕೆಳಗಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಸಾಗಿದ್ದು, ಈ ವೇಳೆ ಬಂಗಾರದ ಗಟ್ಟಿಯ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ದ್ವಿಚಕ್ರ ವಾಹನದಲ್ಲಿ ಇರುವುದಾಗಿ ತಿಳಿಸಿದ್ದು, ಕಾರು ಎಕ್ಕೂರು ಬಳಿ ತಲುಪಿದಾಗ ಹಿಂಬಾಲಿಸಿಕೊಂಡು ಬಂದ ದ್ವಿಚಕ್ರ ವಾಹನದಲ್ಲಿದ್ದ ಆರೋಪಿ ಬಂಗಾರದ ಗಟ್ಟಿಯನ್ನು ಕಾರಿನಲ್ಲಿ ಕುಳಿತವರಿಗೆ ನೀಡಿದ್ದಾನೆ.

ರಾತ್ರಿ ಸುಮಾರು 9.15ರ ವೇಳೆಗೆ ಮುಸ್ತಾಫ ಅವರನ್ನು ಕಾರಿನಿಂದ ಇಳಿಸಿ, ಸ್ಕೂಟರನ್ನು ಅಲ್ಲೇ ಬಿಟ್ಟು ತೊಕ್ಕೊಟ್ಟು ಕಡೆಗೆ ಪರಾರಿಯಾಗಿದ್ದಾರೆ. ಬಳಿಕ ಮುಸ್ತಫಾ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ ಕೇಳಿ ಪಡೆದು ಸ್ನೇಹಿತನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು ಅಂಗಡಿಯ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದು ಮುಸ್ತಫಾ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮತ್ತು ಕಾರಿನಲ್ಲಿ ಬಂದ ನಾಲ್ವರು ಆಯುಧ ತೋರಿಸಿ ಬೆದರಿಕೆ ಹಾಕಿ, ಕಾರಿನಲ್ಲಿ ಬಲವಂತವಾಗಿ ಅಪಹರಣ ಮಾಡಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದು, ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ದರೋಡೆ ಪ್ರಕರಣದ ತನಿಖೆಯನ್ನು ನಗರ ಅಪರಾಧ ಪತ್ತೆದಳ ಮತ್ತು ಬಂದರು ಪೊಲೀಸರು ನಡೆಸುತ್ತಿದ್ದಾರೆ. ಈಗಾಗಲೇ ಮಹತ್ವದ ಸುಳಿವು ಲಭ್ಯವಾಗಿದೆ. ದರೋಡೆ ಯೋಜನೆ ರೂಪಿಸಿದ ವ್ಯಕ್ತಿ ಮತ್ತು ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದೆ. ಒಂದೆರಡು ದಿನದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

- Advertisement -

Latest News

error: Content is protected !!