ಬೆಂಗಳೂರು: ಕಾಂತಾರ- ಚಾಪ್ಟರ್ 1 ಚಲನಚಿತ್ರಕ್ಕೆ ಮೈಸೂರು ಸ್ಯಾಂಡಲ್ ಸೋಪ್ ಸುಗಂಧ ಪಾರ್ಟ್ ನರ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ, ರಿಷಭ್ ಶೆಟ್ಟಿ ನಟನೆಯ ಕಾಂತಾರ- ಚಾಪ್ಟರ್ 1 ಸಿನಿಮಾಕ್ಕೆ ರಾಜ್ಯ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು ಫ್ರಾಗ್ನೆನ್ಸ್ ಪಾರ್ಟ್ ನರ್ ಆಗಿ ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.
ಕೆಎಸ್ ಡಿಎಲ್ ಮತ್ತು ಕಾಂತಾರ ಚಿತ್ರ ತಂಡದ ನಡುವೆ ಒಪ್ಪಂದ ಏರ್ಪಟ್ಟಿದ್ದು, ಚಿತ್ರತಂಡವು ತನ್ನ ಪ್ರತಿ ಪ್ರದರ್ಶನದಲ್ಲೂ ಕೆಎಸ್ ಡಿಎಲ್ ಉತ್ಪನ್ನಗಳಿಗೆ ಪ್ರಚಾರ ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್, ಸ್ಪ್ಯಾನಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಕಾಂತಾರ ಚಲನಚಿತ್ರ ತೆರೆ ಕಾಣಲಿದ್ದು, ಭಾರತದ 7,000 ಹಾಗೂ 30 ರಾಷ್ಟ್ರಗಳ 6,500ಕ್ಕೂ ಹೆಚ್ಚು ಚಿತ್ರ ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಎರಡು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಒಲವು ಹೊಂದಿರುವ ಮೈಸೂರು ಸ್ಯಾಂಡಲ್ ಸೋಪ್ ತಯಾರಕ ಸಂಸ್ಥೆಯಾಗಿರುವ ಕೆಎಸ್ ಡಿಎಲ್, ಈಗ ಕಾಂತಾರ ಚಿತ್ರ ತಂಡದ ಜೊತೆ ಕೈ ಜೋಡಿಸಿದೆ.
ಖ್ಯಾತ ಚಲನಚಿತ್ರ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗೆ ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯಾಗಿ ಇತ್ತೀಚೆಗಷ್ಟೇ ಕೆಎಸ್ ಡಿಎಲ್ ನೇಮಿಸಿಕೊಂಡಿತ್ತು.


