ಕಾರ್ಕಳ; ತನ್ನ ಬರ್ತಡೇ ಎಂದು ಮಗನಿಗೆ ಐಸ್ ಕ್ರೀಂ ತರಲು ಹೋದ ತಂದೆಯೊಬ್ಬರು ಸ್ಕೂಟಿ ಸಮೇತ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಜೂನ್ 7ರಂದು ನಡೆದಿದೆ.
ಕುಕ್ಕುಂದೂರು ಗ್ರಾಮದ ಪರಪು ನಿವಾಸಿ, ಆಟೋ ಚಾಲಕ, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಮೃತ ದುರ್ದೈವಿ. ತನ್ನ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಅವರು ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲು ಮನೆಯಿಂದ ಸ್ಕೂಟಿಯಲ್ಲಿ ಪೇಟೆಗೆ ಬಂದಿದ್ದರು. ನಂತರ ಅವರು 10.30ರ ವೇಳೆಗೆ ಮನೆಗೆ ವಾಪಸಾಗುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿ ಸಹಿತ ಹೊಳೆಗೆ ಬಿದ್ದಿದ್ದರು.
ರಾತ್ರಿಯಿಡೀ ಸುಬ್ರಹ್ಮಣ್ಯ ಅವರಿಗಾಗಿ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಊರಿನವರು ಹುಡುಕುವಾಗ ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ. ಸುಬ್ರಹ್ಮಣ್ಯ ಅವರು ತಂದೆ, ತಾಯಿ, ಸಹೋದರಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


