ನವದೆಹಲಿ: ಕಾಶ್ಮೀರ್ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಉದ್ದಕ್ಕೂ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಉದ್ವಿಗ್ನತೆ ಹೆಚ್ಚಿದ ಪರಿಣಾಮವಾಗಿ ಭಾರತೀಯ ವಾಯುಪಡೆಯು (ಐಎಎಫ್) ಶ್ರೀನಗರ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆದಿದೆ.
ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಉಗ್ರ ಸಂಘಟನೆಗಳ ಗುರಿಯಿಟ್ಟು ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಶ್ರೀನಗರ ವಿಮಾನ ನಿಲ್ದಾಣದ ಜೊತೆಗೆ ನಾಗರಿಕ ವಿಮಾನಗಳ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಶ್ರೀನಗರ ವಿಮಾನ ನಿಲ್ದಾಣ ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದ್ದು, ವಿಮಾನ ಸಂಚಾರ, ಲ್ಯಾಂಡಿಂಗ್, ಅಗ್ನಿಶಾಮಕ ಸೇರಿದಂತೆ ಎಲ್ಲಾ ವಾಯು ಸುರಕ್ಷಾ ಕಾರ್ಯವಿಧಾನಗಳನ್ನು ಸಹ ನಿಯಂತ್ರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ, ಅಮೃತಸರ, ಚಂಡಿಗಢ, ಧರ್ಮಶಾಲಾ, ಲೇಹ್‌ನ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಿಂತಿದ್ದು, ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ ಎಂದು ತಿಳಿದುಬಂದಿದೆ.


