ಉಡುಪಿ: ಕೆಲಸಕ್ಕೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಚ್ಚಿಲ ಭಾಸ್ಕರನಗರದಲ್ಲಿ ಹೊಟೇಲ್ ಕೆಲಸಕ್ಕೆ ತೆರಳುತ್ತಿದ್ದ ಮೊಹಮ್ಮದ್ ಶಿನಾಲ್ ಎಂಬ ಯುವಕನನ್ನು ಕಾರಿನಲ್ಲಿ ಬಂದ ವ್ಯಕ್ತಿಗಳು ಅಪಹರಿಸಲು ಯತ್ನಿಸಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ಮೋಸೀನ್, ಮೊಹಮ್ಮದ್ ಸಂಶೀರ್, ಮೊಹಮ್ಮದ್ ನೌಪಿಲ್ ಬಂಧಿತರು.
ಇಬ್ಬರು ಕಾರಿನಲ್ಲಿ ಬಂದು ಉಚ್ಚಿಲದಲ್ಲಿರುವ ಬೆಳಪು ಸೊಸೈಟಿ ಬಳಿ ಮೊಹಮ್ಮದ್ ಶಿನಾಲ್ ಅವರನ್ನು ತಡೆದು ನಿಲ್ಲಿಸಿ ಮೊಬೈಲ್ ಅನ್ನು ಕಸಿದು ಕಾರಿನಲ್ಲಿ ಕುಳ್ಳಿರಿಸಲು ಯತ್ನಿಸಿದ್ದರು. ಈ ವೇಳೆ ಮೊಹಮ್ಮದ್ ಶಿನಾಲ್ ತನ್ನ ಮೊಬೈಲ್ ಅನ್ನು ಎಳೆದು ತಪ್ಪಿಸಿಕೊಂಡು ತೆರಳಿದ್ದು, ಆರೋಪಿಗಳು ಅಲ್ಲಿಗೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಅಲ್ಲಿಗೆ ಬೈಕಿನಲ್ಲಿ ಬಂದಿದ್ದ ಇನ್ನೋರ್ವ ಆರೋಪಿ ಆಡನ್ ಕೂಡ ಸೇರಿಕೊಂಡಿದ್ದ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದಾಗ ಆಡನ್ ಪರಾರಿಯಾಗಿದ್ದು ಅಬ್ದುಲ್ ಮೋಸೀನ್, ಮೊಹಮ್ಮದ್ ಸಂಶೀರ್, ಮೊಹಮ್ಮದ್ ನೌಪಿಲ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಉಳಿದ ಇಬ್ಬರು ಓಡಿ ಹೋಗಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.