ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಖಿಂಗ್ ಸುದ್ದಿಯೊಂದನ್ನು ನೀಡಿದ್ದು, ಬಿಯರ್ ಪ್ರಿಯರ ಜೇಬಿಗೂ ಕತ್ತರಿ ಹಾಕಿದೆ.
ರಾಜ್ಯ ಸರ್ಕಾರವು ಸೋಮವಾರದಂದು ಈ ಕುರಿತಂತೆ ಆದೇಶವನ್ನು ಹೊರಡಿಸಿದ್ದು, ಆಯ್ದ ಬ್ರ್ಯಾಂಡ್‌ಗಳ ಬಿಯರ್‌ನ ಪ್ರತಿ ಬಾಟಲ್ ಮೇಲೆ 10 ರೂ.ನಿಂದ 45 ರೂ. ವರೆಗೆ ಬೆಲೆಯನ್ನು ಹೆಚ್ಚಿಸಿ, ಈ ಪರಿಷ್ಕೃತ ಆದೇಶ ತಕ್ಷಣದಿಂದಲೇ ಜಾರಿಗೆ ಬರುವಂತೆ ತಿಳಿಸಿದೆ.
ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿರುವಂತೆ ಲಜೆಂಡ್ ಬಿಯರ್ ಮೊದಲು 100 ರೂ. ಗೆ ಸಿಗುತ್ತಿದ್ದು, ಇದೀಗ 45 ರೂ.ಗೆ ಏರಿಕೆಯಾಗಿದ್ದು, ನಿರ್ದಿಷ್ಠ ಬೆಲೆ 130 ರೂ. ಆಗಿದೆ. ಪವರ್‌ಕೂಲ್ ಹೆಸರಿನ ಬಿಯರ್ ಬೆಲೆ 155 ರೂ.ಗೆ, ಹಂಟರ್ ಬಿಯರ್‌ನ ಬೆಲೆ 180 ರಿಂದ 190 ರೂ.ಗೆ, ವುಡ್‌ಪೀಕರ್ ಕ್ರೆಸ್ಟ್ ಹಾಗೂ ವುಡ್‌ಪೀಕರ್ ಗ್ಲೈಡ್ ಬಿಯರ್ ಬೆಲೆಯಲ್ಲಿ ತಲಾ 10 ರೂ. ಏರಿಕೆಯಾಗಿದೆ.
ಇನ್ನು ಬಿಯರ್ ದರ ಪರಿಷ್ಕರಿಸಲು 2024ರ ಆಗಸ್ಟ್‌ನಲ್ಲೇ ಅಧಿಸೂಚನೆ ಹೊರಡಿಸಲಾಗಿದ್ದು, ವಿವಿಧ ಕಾರಣಗಳಿಂದ ದರ ಪರಿಷ್ಕರಣೆ ಕಡತಕ್ಕೆ ಸಿಎಂ ಸಹಿ ಹಾಕಿರಲಿಲ್ಲ. ದರ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಿದೆ.