ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚುನಾವಣಾ ಸಹ-ಉಸ್ತುವಾರಿಯಾಗಿ ನೇಮಕಗೊಂಡಿರುವ ಸಂಸದ ನಳೀನ್ ಕುಮಾರ್ ಕಟೀಲ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಶನಿವಾರ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ನಳೀನ್ ಕುಮಾರ್ ಕಟೀಲ್, ಕೇರಳ ಬೂತ್ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಮೋ ಆಪ್ ಮೂಲಕ ನಡೆಸಿದ ಸಂವಾದದಲ್ಲಿ
ಕಾಸರಗೋಡು ಜಿಲ್ಲೆಯ ಬೂತ್ ನಂಬರ್ 165ರ ಕಾರ್ಯಕರ್ತರೊಂದಿಗೆ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್, ಕೇರಳ ಚುನಾವಣಾ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಕುಂಟಾರು ರವೀಶ್ ತಂತ್ರಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಅಲ್ಲದೇ, ಕಾಸರಗೋಡು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಧ, ಜಿಲ್ಲಾ ಕಾರ್ಯದರ್ಶಿ ಮನು ಲಾಲ್ ಮೆಲೋತ್, ಕಾಸರಗೋಡು ನಗರ ಪಾಲಿಕೆ ಸದಸ್ಯೆ ರಂಜಿತಾ ಕೂಡಾ ಹಾಜರಿದ್ದರು.


