ಭಾರತದಲ್ಲಿ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 30 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದೆ.
ಲಾಕ್ ಡೌನ್ ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಅಂಗಡಿ-ಮುಂಗಟ್ಟುಗಳು ಮುಚ್ಚಿರುವ ಪರಿಣಾಮ ಆರ್ಥಿಕ ಚಟುವಟಿಕೆಯೂ ಸ್ಥಗಿತಗೊಂಡಿದೆ. ಇದರ ಮಧ್ಯೆ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 85 ಕೋಟಿ ಮೊಬೈಲ್ ಸಂಖ್ಯೆಗಳ ಪೈಕಿ ಲಾಕ್ ಡೌನ್ ಅವಧಿಯಲ್ಲಿ 2.5 ಕೋಟಿ ಮೊಬೈಲ್ ಸಂಖ್ಯೆಗಳು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.
ಬಹಳಷ್ಟು ಮಂದಿ ಎರಡರಿಂದ ಮೂರು ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದು, ಲಾಕ್ ಡೌನ್ ಅವಧಿಯಲ್ಲಿ ಬಹುತೇಕರು ಸದ್ಯ ಒಂದೇ ಸಂಖ್ಯೆಯನ್ನು ಬಳಸುತ್ತಿದ್ದಾರೆ. ಅಲ್ಲದೆ ಬಹಳಷ್ಟು ಫೋನ್ ಗಳು ಕೆಟ್ಟುಹೋಗಿದ್ದು, ಅಂಗಡಿ-ಮುಂಗಟ್ಟುಗಳು ಮುಚ್ಚಿರುವ ಪರಿಣಾಮ ರಿಪೇರಿ ಆಗುತ್ತಿಲ್ಲ. ಅಲ್ಲದೆ ಬಿಡಿಭಾಗಗಳೂ ಪೂರೈಕೆಯಾಗುತ್ತಿಲ್ಲವಾದ ಕಾರಣ ಕೆಟ್ಟು ಹೋಗಿರುವ ಮೊಬೈಲ್ ಫೋನ್ ಗಳು ಸ್ಥಗಿತಗೊಂಡಿವೆ ಎನ್ನಲಾಗಿದೆ. ಒಂದೊಮ್ಮೆ ಲಾಕ್ ಡೌನ್ ಮುಂದುವರೆದರೆ ಮೇ ಅಂತ್ಯದ ವೇಳೆಗೆ 4 ಕೋಟಿ ಮೊಬೈಲ್ ಸಂಖ್ಯೆಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ.