
ಮಂಗಳೂರು: ಇಲ್ಲಿನ ಮರವೂರು ರೈಲ್ವೇ ಸೇತುವೆ ಪಕ್ಕದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ಟಿಪ್ಪರ್ ಸಹಿತ 150 ಮೆಟ್ರಿಕ್ ಟನ್ ಮರಳನ್ನು ಗಣಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳಿಗೆ150 ಮೆಟ್ರಿಕ್ ಟನ್ ಮರಳು, ಟಿಪ್ಪರ್ ಸಹಿತ ಸುಮಾರು 5 ಲಕ್ಷ ರೂ. ಮೌಲ್ಯದ ವಿವಿಧ ಯಂತ್ರೋಪಕರಣಳು ಸಿಕ್ಕಿದ್ದು, ಅವೆಲ್ಲವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಮೊದಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸೇತುವೆಯ ಎರಡೂ ಬದಿಗಳಲ್ಲಿ ತಲಾ 100 ಮೀ. ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನ ನಿಷೇಧಿಸಿತ್ತು. ಆದರೆ ಇದೀಗ ಇಲಾಖೆಯ ಈ ಆದೇಶದ ಹೊರತಾಗಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ.
ಅಕ್ರಮ ಮರಳುಗಾರಿಕೆ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಎಂ.ಸಿ. ಕೃಷ್ಣವೇಣಿ ಅವರ ಮಾರ್ಗದರ್ಶನದಂತೆ ಗಣಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದರು.


