ಮಂಗಳೂರು: ಕೊರೊನಾ ಮಹಾಮಾರಿಯ ಆಟಾಟೋಪಕ್ಕೆ ಪ್ರಪಂಚದ ಜನರು ತಲ್ಲಣಿಸುತ್ತಿದ್ದಾರೆ. ಈ ಸೋಂಕನ್ನು ಹೊಡೆದೋಡಿಸಲು ಸರ್ಕಾರ, ವೈದ್ಯರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಇದಕ್ಕಾಗಿ ಬರಿಗಾಲಲ್ಲಿ ನಡೆಯುವ, ಶುಕ್ರವಾರವಿಡೀ ಉಪವಾಸದಿಂದ ಇದ್ದು ವ್ರತ ಆಚರಿಸುತ್ತಿದ್ದಾರೆ. ತುಳುನಾಡ ಕಾರಣಿಕ ದೈವ ಕಲ್ಲುರ್ಟಿಯ ಹೆಸರಲ್ಲಿ ಇವರು ಹರಕೆ ಸಲ್ಲಿಸುತ್ತಿದ್ದಾರೆ.
ಬಸಮ್ಮ ಎಂಬ ಮಹಿಳೆಯೇ ಈ ರೀತಿಯ ಹರಕೆ ಹೊತ್ತವರು. ಜಗತ್ತನ್ನು ಕಾಡುತ್ತಿರುವ ಮಹಾಮಾರಿಯ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ನೋಡುತ್ತಲೇ ಆತಂಕಗೊಂಡಿರುವ ಈಕೆ ತಾನು ನಂಬಿದ ದೈವದ ಮೊರೆ ಹೋಗಿದ್ದಾರೆ.ತನ್ನ ಜೀವನದ ಸಂಕಷ್ಟಗಳನ್ನು ಪರಿಹರಿಸಿರುವ ಕಲ್ಲುರ್ಟಿ ದೈವವೇ ಇದೀಗ ಈ ರೋಗವನ್ನೂ ಮಣಿಸುತ್ತಾಳೆ ಅನ್ನೋದು ಈ ಮಹಿಳೆಯ ಬಲವಾದ ನಂಬಿಕೆ.
ಮೂಲತಃ ಬಾಗಲಕೋಟೆಯವರಾದ ಬಸಮ್ಮ ಕಳೆದ 30 ವರ್ಷಗಳ ಹಿಂದೆ ಊರು ಬಿಟ್ಟು ಗಂಡನ ಜೊತೆ ಮಂಗಳೂರಿಗೆ ಬಂದು ಕೂಲಿ ಮಾಡಿಕೊಂಡಿದ್ದವರು. ಮದ್ಯಪಾನ ವ್ಯಸನಿಯಾಗಿದ್ದ ಪತಿ, ಮಕ್ಕಳು ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಇವರು ಇದ್ದ ಕೆಲಸವನ್ನೂ ಕಳೆದುಕೊಂಡರು. ಆಗ ತಾನು ಬಾಡಿಗೆ ಮನೆಯಲ್ಲಿದ್ದ ಮಂಗಳೂರಿನ ಕೂಳೂರು ಸಮೀಪದ ಗುಡ್ಡೆಯಂಗಡಿಯಲ್ಲಿರುವ ಕಲ್ಲುರ್ಟಿ ದೈವದ ಆಸರೆ ಬಯಸಿದ್ದಾರೆ.
ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಆಗಮಿಸುವಂತೆ ಕರೆ ಬಂದಿತಂತೆ. ಆ ಬಳಿಕ ತನಗೆ ಏನೇ ಸಂಕಷ್ಟ ಬಂದೊದಗಿದರೂ ಇದೇ ದೈವಕ್ಕೆ ಹರಕೆ ಹೇಳುವ ಬಸಮ್ಮ ಇದೀಗ ಕೊರೊನಾ ಸಂಕಷ್ಟ ಕಳೆಯಲು ಹರಕೆ ಹೊತ್ತಿದ್ದಾರೆ.
ಇಂತಹ ಕಾಯಿಲೆ ಯಾರಿಗೂ ಬರದಿರಲಿ. ಆದಷ್ಟು ಬೇಗ ಹೆಮ್ಮಾರಿ ದೇಶ ಬಿಟ್ಟು ಹೋಗಲಿ ಎಂದು ಬರಿಗಾಲಲ್ಲಿ ನಡೆಯುವ ಹಾಗೂ ಶುಕ್ರವಾರಪೂರ್ತಿ ಉಪವಾಸದಿಂದಿರುವ ಹರಕೆ ಹೊತ್ತಿದ್ದೇನೆ. ಮಾರಕ ಸೋಂಕು ತೊಲಗುವವರೆಗೂ ಹರಕೆಯನ್ನು ನಿರಂತರವಾಗಿ ಪಾಲಿಸುತ್ತೇನೆ ಅಂತಾರೆ ಬಸಮ್ಮ.