ನವದೆಹಲಿ: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಖೇರನ್ ಸೆಕ್ಟರ್ ಎಲ್‌ಒಸಿಯಲ್ಲಿ ಏಪ್ರಿಲ್ 10 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 15 ಮಂದಿ ಪಾಕಿಸ್ತಾನ ಸೈನಿಕರು, 8 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.
ಎಲ್‌ಒಸಿಯಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯ ಫಿರಂಗಿದಳ, ವಾಯುದಳ ನಡೆಸಿದ ದಾಳಿಯಲ್ಲಿ 15 ಪಾಕಿಸ್ತಾನ ಸೈನಿಕರು ಮತ್ತು 8 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ನೀಡಲಾಗಿದೆ.
ಭಾರತೀಯ ವಿಶೇಷ ಪಡೆ ಐವರು ಕಮಾಂಡೋಗಳನ್ನು ಪಾಕ್ ಉಗ್ರರು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳನ್ನು ನಾಶಪಡಿಸಿದೆ.
ಶುಕ್ರವಾರ ರಾತ್ರಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಕಮಾಂಡೋಗಳ ಸಾವಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆ ಸರಿಯಾದ ತಿರುಗೇಟು ನೀಡಿದೆ. ವಾಯು ದಾಳಿ ನಡೆಸಿ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿದೆ. ಹತ್ಯೆಗೀಡಾದ ಐವರು ಭಯೋತ್ಪಾದಕರಲ್ಲಿ ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರಾಗಿದ್ದು, ಇಬ್ಬರು ಜೈಶ್-ಇ-ಮೊಹಮ್ಮದ್ ಸಂಘಟನೆಯ ತರಬೇತಿ ಪಡೆದಿದ್ದಾರೆ. ಎಲ್‌ಒಸಿ ಉದ್ದಕ್ಕೂ ಶಾರ್ದಾ, ದುದ್ನಿಯಾಲ್, ಶಾಹಕೋಟ್ ಪ್ರದೇಶದಲ್ಲಿ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ.
