ಲಂಡನ್ : ಇಡೀ ವಿಶ್ವವನ್ನೇ ತನ್ನ ಕಬಂಧಬಾಹುಗಳಿಂದ ತಲ್ಲಣಗೊಳಿಸುತ್ತಿರುವ ಕೋವಿಡ್ 19 ಸೋಂಕಿಗೆ ಒಳಗಾಗಿ ಗಂಭೀರ ಅರೋಗ್ಯ ಸ್ಥಿತಿಯಲ್ಲಿದ್ದ 55 ವರ್ಷ ಪ್ರಾಯದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕಡೆಗೂ ಕೊರೊನ ವಿರುದ್ದದ ಹೋರಾಟ ಗೆದ್ದು ಬಂದಿದ್ದಾರೆ . ಕೊರನ ಸೋಂಕು ದೃಢಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬೋರಿಸ್ ಜಾನ್ಸನ್ ಸಂಪೂರ್ಣ ಗುಣಮುಖರಾಗಿ ಇಂದಿನಿಂದ ತಮ್ಮ ಕರ್ತವ್ಯಕ್ಕೂ ಮರಳಿದ್ದಾರೆ.
ಕೊರನ ಮಹಾಮಾರಿಗೆ ಜರ್ಮನಿಯ ಹಣಕಾಸು ಸಚಿವ ಥಾಮಸ್ ಸ್ಕೇಫರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಾಗತಿಕ ನಾಯಕರ ಆತ್ಮವಿಶ್ವಾಸ ಕುಂದಿತ್ತು. ನಂತರ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೂ ಕೊರೋನಾ ಸೋಂಕು ತಗುಲಿದೆ ಎಂದು ಗೊತ್ತಾದಾಗ ಜಗತ್ತೇ ವಿಚಲಿತವಾಗಿತ್ತು . ಈಗ ಬೋರಿಸ್ ಜಾನ್ಸನ್ ಗುಣಮುಖರಾಗಿರುವುದು ತುಸು ಸಮಾಧಾನ ತಂದಿದೆ.
ಕೊರೋನಾ ಪೀಡಿತರಾಗಿದ್ದ ಬೋರಿಸ್ ಜಾನ್ಸನ್ ಗುಣಮುಖರಾಗಿರುವುದಷ್ಟೇ ಅಲ್ಲದೆ ಇಂದಿನಿಂದ ಕರ್ತವ್ಯಕ್ಕೂ ಮರಳಿದ್ದಾರೆ. ಕೆಲಸ ಆರಂಭಿಸಿರುವ ಬೋರಿಸ್ ಜಾನ್ಸನ್, ಕೊರೋನಾದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವುದು ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಬೇರೆ ದೇಶಗಳಂತೆ ಇಂಗ್ಲೆಂಡಿನಲ್ಲೂ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು ಸದ್ಯ ಇಂಗ್ಲೇಂಡಿನ ಕೊರೋನಾ ಪೀಡಿತರ ಸಂಖ್ಯೆ 152,840ಕ್ಕೆ ಏರಿಕೆಯಾಗಿದೆ. ಬ್ರಿಟೀಷರ ನಾಡಿನಲ್ಲಿ ಕಿಲ್ಲರ್ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 20,732ಕ್ಕೆ ಏರಿಕೆಯಾಗಿದೆ.