ಬಿಹಾರ; ಅಪರಾಧ ಎಸಗಿ ಜೈಲು ಸೇರಿದ್ರೆ ಅಪರಾಧಿಗಳು ಬುದ್ಧಿ ಕಲಿತಾರೆ ಅನ್ನೋದು ನಂಬಿಕೆ. ಆದರೆ ನಾಯಿ ಬಾಲ ಡೊಂಕೇ ಅನ್ನೋ ಹಾಗೇ ಕೆಲವರು ಎಷ್ಟೇ ದೊಡ್ಡ ಶಿಕ್ಷೆಯಾದ್ರು ಅದೇ ಕೆಲ್ಸ ಮಾಡ್ತಾರೆ. ಇಲ್ಲೊಬ್ಬನದ್ದು ಅದೇ ಕಥೆ. ಆದ್ರೆ ಇಂತಹ ಇತರರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.
ಹೌದು.. ಅಪರಾಧ ಎಸಗಿ ಜೈಲು ಸೇರಿದ ಕೈದಿಯೊಬ್ಬ ನಾನು ಮತ್ತೆ ಅದೇ ಕೆಲಸ ಮಾಡುತ್ತೇನೆ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾನೆ.ಬಿಹಾರದ ಸಿವಾನ್ನಲ್ಲಿ ಕೃಷ್ಣ ರೈ ಎಂಬ ಮದ್ಯ ಕಳ್ಳಸಾಗಣೆದಾರನೊಬ್ಬ ಬಂಧನಕ್ಕೆ ಒಳಗಾಗಿದ್ದ. ಈತನನ್ನು ಪೊಲೀಸ್ ಜೀಪ್ನಲ್ಲಿ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈತ ಪೊಲೀಸರಿಗೆ ಬಹಿರಂಗ ಸವಾಲು ಹಾಕಿದ್ದಾನೆ.
ಯೆಸ್…ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಈತ ನಾನು ಪೊಲೀಸರಿಗೆ ಹೆದರೋದಿಲ್ಲ. ಇಲ್ಲಿಂದ ರಿಲೀಸ್ ಆಗುತ್ತಲೇ ನಾನು ಮದ್ಯ ಮಾರಾಟ ಪುನಃ ಆರಂಭಿಸುತ್ತೇನೆ ಎಂದು ಹೇಳಿದ್ದಾನೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಆರೋಪಿಯ ಈ ಮಾತುಗಳನ್ನು ಕೇಳಿದ ಬಳಿಕ ಪೊಲೀಸ್ ಇಲಾಖೆ ಟೀಕೆಗಳನ್ನು ಎದುರಿಸುತ್ತಿದೆ. ವೈದ್ಯಕೀಯ ತಪಾಸಣೆಗೆ ಆರೋಪಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಯು ನಾನು ಏಳು ವರ್ಷಗಳಿಂದ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ಆರೋಪಿಯನ್ನು ಕೃಷ್ಣ ರೈ ಎಂದು ಗುರುತಿಸಲಾಗಿದೆ. ಈತ ಮದರ್ಪುರ ಮೂಲದವನು ಎನ್ನಲಾಗಿದೆ.
ನಾನು ಈ ಕಳ್ಳಸಾಗಣಿಕೆಗೆ ಸುಮಾರು ಐವತ್ತು ಮಂದಿ ಸಹಚರರನ್ನು ಹೊಂದಿದ್ದೇನೆ. ಬಿಹಾರದಲ್ಲಿ ಮದ್ಯ ಕಳ್ಳಸಾಗಣೆ ಮಾಡಿ ಮೂರು ಬಾರಿ ಜೈಲಿಗೆ ಹೋಗಿದ್ದೇನೆ. ಜೈಲಿನಿಂದ ಹೊರ ಬಂದ ಬಳಿಕವೂ ನಾನು ಮದ್ಯ ಮಾರಾಟ ಮಾಡಿದ್ದೇನೆ. ಜೈಲಿಗೆ ಹೋಗಿ ಬರುತ್ತಿರೋ ಹಣವನ್ನು ಮದ್ಯ ಮಾರಾಟದಿಂದ ವಸೂಲಿ ಮಾಡಿಕೊಳ್ತೇನೆ ಎಂದು ಹೇಳಿದ್ದಾನೆ. ಅಂದಹಾಗೆ ಬಿಹಾರದಲ್ಲಿ ಮದ್ಯ ಸೇವನೆಯನ್ನು ನಿಷೇಧಗೊಳಿಸಲಾಗಿದೆ. ಈತನ ದುರಂಹಕಾರಕ್ಕೆ ನೆಟಿಜನ್ಸ್ ಆಕ್ರೋಶ ಹೊರ ಹಾಕಿದ್ದಾರೆ.