ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಧೇಯಕ ಮಂಡಿಸಲಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಅನುಮೋದನೆ ಪಡೆಯಲಾಗಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ – 2025 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲು ಅಥವಾ ಐದು ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಮತ್ತು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ವಿಧೇಯಕ ಅವಕಾಶ ಕಲ್ಪಿಸಲಿದೆ.
ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ವಿಧೇಯಕದಲ್ಲಿ ಒಳಗೊಂಡಿದ್ದು, ಧಾರ್ಮಿಕ, ಜನಾಂಗೀಯ, ಜಾತಿ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದು ಅಥವಾ ದ್ವೇಷವನ್ನು ಉತ್ತೇಜಿಸುವುದು ಅಪರಾಧವಾಗಲಿದೆ.ದ್ವೇಷ ಭಾಷಣವು ಗಂಭೀರ ಅಪರಾಧ ಎಂದು ಇತ್ತೀಚೆಗೆ ಸುಪ್ರಿಂ ಕೋರ್ಟ್ ವ್ಯಾಖ್ಯಾನಿಸಿತ್ತು.


