ಮಂಗಳೂರು: ಶಿಕ್ಷಣ ಸಂಸ್ಥೆಗಳು ಜಾತಿ, ಧರ್ಮದ ಭೇದವಿಲ್ಲದೆ ಕಾರ್ಯನಿರ್ವಹಿಸಬೇಕು. ಎಲ್ಲ ಧರ್ಮಗಳ ಹಬ್ಬಗಳಿಗೂ ಗೌರವ ನೀಡಬೇಕು. ಹಬ್ಬಗಳಂದು ರಜೆ ನೀಡದಿದ್ದರೂ ಪರವಾಗಿಲ್ಲ, ಆದರೆ ಪರೀಕ್ಷೆಗಳನ್ನು ನಡೆಸಬಾರದು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಸಲಹೆ ನೀಡಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬಗಳ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕ್ರಿಸ್ಮಸ್ ಹಬ್ಬದ ವೇಳೆ ಪರೀಕ್ಷೆ ನಿಗದಿಪಡಿಸಿದಾಗ, ವಿದ್ಯಾರ್ಥಿ ಸಂಘಟನೆಗಳು ಮನವಿ ಸಲ್ಲಿಸಿ ಪರೀಕ್ಷೆಗಳನ್ನು ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದವು ಎಂದು ಸ್ಮರಿಸಿದರು.
ಎಲ್ಲ ಧರ್ಮಗಳ ಹಬ್ಬಗಳ ಸಂದರ್ಭದಲ್ಲೂ ಇದೇ ರೀತಿಯ ಸಮಾನ ನೀತಿಯನ್ನು ಅನುಸರಿಸಬೇಕು. ಪ್ರತಿ ಬಾರಿಯೂ ಪರೀಕ್ಷೆಗಳ ವಿಚಾರವಾಗಿ ಜಿಲ್ಲಾಡಳಿತಕ್ಕೆ ಕರೆ ಮಾಡಿ ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಆಗ್ರಹಿಸಿದರು.


