Thursday, April 25, 2024
Homeತಾಜಾ ಸುದ್ದಿಯುವಕರಿಗೆ ಸ್ಫೂರ್ತಿ : DOSA PLAZA ಸಾಮ್ರಾಜ್ಯದ ಅಧಿಪತಿ ಪ್ರೇಮ್ ಗಣಪತಿ

ಯುವಕರಿಗೆ ಸ್ಫೂರ್ತಿ : DOSA PLAZA ಸಾಮ್ರಾಜ್ಯದ ಅಧಿಪತಿ ಪ್ರೇಮ್ ಗಣಪತಿ

spot_img
- Advertisement -
- Advertisement -

ಮುಂಬೈ : 1990ರ ಒಂದು ತೀವ್ರ ಚಳಿಗಾಲದ ಮುಂಜಾನೆ. ಮುಂಬೈಯ ಬಾಂದ್ರಾ ರೈಲು ನಿಲ್ದಾಣದಲ್ಲಿ ಒಬ್ಬ 17 ವರ್ಷದ ಹುಡುಗನು ಅಳುತ್ತಾ ನಿಂತಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆ ಮತ್ತು ಕಿಸೆಯಲ್ಲಿದ್ದ 200 ರೂಪಾಯಿ ಬಿಟ್ಟು ಅವನ ಹತ್ತಿರ ಇದ್ದ ಎಲ್ಲವನ್ನೂ ಅವನ ಗೆಳೆಯ ಕದ್ದು ಓಡಿ ಹೋಗಿದ್ದ. ಈ ಹುಡುಗನಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ.
ಸರಿಯಾಗಿ 22 ವರ್ಷಗಳ ನಂತರ ಅದೇ ಹುಡುಗ ಜಗತ್ತಿನಾದ್ಯಂತ ದೋಸೆಗಳ ಸಾಮ್ರಾಜ್ಯವನ್ನು ಕಟ್ಟಿದ್ದ! 30 ಕೋಟಿ ಬೆಲೆ ಬಾಳುವ ಉದ್ಯಮವನ್ನು ಹೊಂದಿದ್ದ , ಜಗತ್ತಿನ ಏಳು ರಾಷ್ಟ್ರಗಳಲ್ಲಿ ಉದ್ಯಮವನ್ನು ವಿಸ್ತಾರ ಮಾಡಿದ್ದ. ಅದು ‘DOSA PlAZA’ ಬೆಳೆದ ರೀತಿ!….. ಅದನ್ನು ಕಟ್ಟಿದವರು ಪ್ರೇಮ್ ಗಣಪತಿ. ಅದೊಂದು ರೋಚಕವಾದ ಇತಿಹಾಸ.


ಪ್ರೇಮ್ ಗಣಪತಿ ಹುಟ್ಟಿದ್ದು ತಮಿಳುನಾಡಿನ ತೂತುಕುಡಿಯ ನಾಗಲಾಪುರಂ ಎಂಬ ಪುಟ್ಟ ಹಳ್ಳಿಯಲ್ಲಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅವನಿಗೆ ಭರ್ತಿ ಏಳು ಜನ ಒಡಹುಟ್ಟಿದವರು. ಅಪ್ಪ ಅಮ್ಮನಿಗೆ ಒಂದು ತುತ್ತಿನ ಊಟವನ್ನು ಜೋಡಿಸುವುದು ಕೂಡ ಕಷ್ಟವೇ ಆಯಿತು. ಪ್ರೇಮ್ ಕಲಿಯುವುದರಲ್ಲಿ ಬಹಳ ಬುದ್ದಿವಂತ , ಆದರೆ ಮನೆಯವರ ಕಷ್ಟ ನೋಡಲು ಸಾಧ್ಯವಾಗದೆ ಎಸೆಸೆಲ್ಸಿ ಪಾಸಾದ ಕೂಡಲೇ ಚೆನ್ನೈ ದಾರಿ ಹಿಡಿದ. ಅಲ್ಲಿ ಮಾಡದಿರುವ ವೃತ್ತಿಗಳಿಲ್ಲ. ತಿಂಗಳಿಗೆ 250 ರೂಪಾಯಿ ಸಂಪಾದನೆ ಆಗುತಿತ್ತು. ತಾನು ಅರೆಹೊಟ್ಟೆ ಉಂಡು ಅಷ್ಟೂ ಹಣವನ್ನು ಅವನು ಮನೆಗೆ ಕಳುಹಿಸಿಕೊಡುತ್ತಿದ್ದ. ಅದೇ ಹೊತ್ತಿಗೆ ಅವನ ದೌರ್ಭಾಗ್ಯ ಅಂದ ಹಾಗೆ ಒಬ್ಬ ಮುಂಬೈಯ ಚಾಲಾಕಿ ಗೆಳೆಯ ದೊರೆತಿದ್ದ. ಇವನಲ್ಲಿ ಮುಂಬೈಯ ಬಣ್ಣದ ಕನಸುಗಳನ್ನು ಬಿತ್ತಿದ. ಅಲ್ಲಿ ತಿಂಗಳಿಗೆ 1200 ರೂಪಾಯಿ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಇವನನ್ನು ಮುಂಬೈಗೆ ಕರೆದುಕೊಂಡು ಹೋದ. ಬಾಂದ್ರಾ ಸ್ಟೇಷನ್ನಿನಲ್ಲಿ ಇವನನ್ನು ಮಲಗಿಸಿ ರಾತ್ರಿ ಎಲ್ಲವನ್ನೂ ಕದ್ದು ಓಡಿದ. ಪ್ರೇಮ್ ಬೆಳಿಗ್ಗೆ ಅದೇ ಸ್ಟೇಷನ್ನಿನಲ್ಲಿ ಅಳುತ್ತಾ ನಿಂತಿದ್ದ.


ಅವನ ಕಷ್ಟ ನೋಡಿ ತಮಿಳು ಗೊತ್ತಿದ್ದ ಒಬ್ಬ ಅರ್ಚಕರು ಇವನನ್ನು ಒಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಹಾಕಿದರು. ನಂತರ ಸ್ವಲ್ಪ ಹಣ ಒಟ್ಟು ಮಾಡಿ ಕೊಟ್ಟು ಚೆನ್ನೈಗೆ ಟಿಕೆಟ್ ಮಾಡಿ ಕೊಡುತ್ತೇನೆ, ಹಿಂದೆ ಹೋಗು ಅಂದರು. ಆಗ ಕೇವಲ 17 ವರ್ಷದ ಪ್ರೇಮ್ ಹೇಳಿದ ಮಾತುಗಳು ಅದ್ಭುತವಾಗಿ ಇದ್ದವು.” ನಾನು ಹಿಂದೆ ಹೋಗಿ ನನ್ನ ಸೋತ ಮುಖವನ್ನು ಮನೆಯವರಿಗೆ ತೋರಿಸುವುದಿಲ್ಲ. ಮನೆಯಲ್ಲಿ ತುಂಬಾ ಕಷ್ಟ ಇದೆ. ಸ್ವಂತ ಕಾಲ ಮೇಲೆ ನಿಲ್ಲದೆ ಊರಿಗೆ ಹೋಗುವುದಿಲ್ಲ. ನಿಮಗೆ ಸಾಧ್ಯವಾದರೆ ನನಗೊಂದು ಉದ್ಯೋಗ ಕೊಡಿಸಿ” ಎಂದು ವಿನಂತಿ ಮಾಡಿದ. ಒಪ್ಪಿದ ಆ ಅರ್ಚಕರು ಅವನನ್ನು ಮಾಹೀಮ್ ಬೇಕರಿಗೆ ಕರೆದುಕೊಂಡು ಹೋಗಿ ಅಲ್ಲಿ ಪಾತ್ರೆಯನ್ನು ತೊಳೆಯುವ ಕೆಲಸವನ್ನು ಕೊಡಿಸಿದರು. ತಿಂಗಳಿಗೆ 150 ರೂ. ಸಂಬಳ. ಬಿಡುವಿನ ಹೊತ್ತಲ್ಲಿ ಅದೇ ಕೆಲಸವನ್ನು ಬೇರೆ ಎರಡು ಹೋಟೆಲುಗಳಲ್ಲಿ ಮಾಡಿ ಒಂದಿಷ್ಟು ಸಂಪಾದನೆ ಮಾಡಿದ. ಆಗಲೂ ಪ್ರತೀ ತಿಂಗಳು ಮನೆಗೆ ಹಣ ಕಳಿಸುವುದನ್ನು ಮರೆಯಲಿಲ್ಲ. ಎರಡು ವರ್ಷ ಪ್ರೇಮ್ ಬಹಳ ಚಂದವಾಗಿ ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಕಲಿತರು. ಆಗ ಬಂದಿತು ತಳ್ಳು ಗಾಡಿಯ ಕನಸು! ಬೇಕರಿಯ ಕೆಲಸ ಬಿಟ್ಟರು.
150 ರೂಪಾಯಿ ತಿಂಗಳ ಬಾಡಿಗೆಯ ತಳ್ಳು ಗಾಡಿಯನ್ನು ಪಡೆದು, 1,000 ರೂ. ವೆಚ್ಚದಲ್ಲಿ ಪಾತ್ರೆ ಮತ್ತು ಸ್ಟೋವ್ ಖರೀದಿ ಮಾಡಿದರು. ಚಂದವಾಗಿ ಇಡ್ಲಿ, ದೋಸೆ ಮಾರುತ್ತಾ ವಾಶಿ ರೈಲ್ವೆ ಸ್ಟೇಶನ್ ಹೊರಗೆ ಒಂದಿಷ್ಟು ವ್ಯಾಪಾರ ಮಾಡಿದರು. ಅವರ ಗಾಡಿಗೆ ಲೈಸೆನ್ಸ್ ಇರಲಿಲ್ಲ. ಅದರಿಂದ ಪೊಲೀಸರು ಅವರ ಗಾಡಿಯನ್ನು ಸೀಜ್ ಮಾಡಿ ಸ್ಟೇಷನ್ನಿಗೆ ಹೋಗುತ್ತಿದ್ದರು. ಹಲವು ಬಾರಿ ದಂಡ ಕಟ್ಟಿ ಅಥವಾ ಲಂಚ ಕೊಟ್ಟು ಬಿಡಿಸಿ ಬರುವಾಗ ಸುಸ್ತೋ ಸುಸ್ತು! ಎರಡು ವರ್ಷ ಆದಾಗ 50,000ರೂಪಾಯಿ ಕಿಸೆಯಲ್ಲಿತ್ತು ಮತ್ತು ಗ್ರಾಹಕರ ಸಂತೃಪ್ತಿಯು ಜೊತೆಗಿತ್ತು. ಆಗ ಶುರುವಾಯಿತು ಸ್ವಂತ ಕ್ಯಾಂಟೀನ್ ಕನಸು!


ವಾಷಿ ರೈಲು ನಿಲ್ದಾಣದ ಮುಂದೆ 50,000ರೂಪಾಯಿ ಮುಂಗಡ ಮತ್ತು 5,000 ರೂಪಾಯಿ ಬಾಡಿಗೆಯ ಒಂದು ಜಾಗವನ್ನು ಪಡೆದು ಕ್ಯಾಂಟೀನ್ ಮಾಡಿದರು. ಅಲ್ಲಿ ಹೆಚ್ಚು ಕಾಲೇಜು ಮಕ್ಕಳು ತಿಂಡಿ ತಿನ್ನಲು ಬರುತ್ತಿದ್ದರು. ಆಗ ಅವರ ಭಿನ್ನ ಭಿನ್ನವಾದ ಅಭಿರುಚಿಗಳನ್ನು ಅಧ್ಯಯನ ಮಾಡಿದರು. ಹಲವು ವಿಧವಾದ ತಿಂಡಿಯನ್ನು ಮಾಡಿ ಗೆಲುವು ಸಾಧ್ಯವಿಲ್ಲ ಎಂದು ಅರಿತರು. ದೋಸೆಗಳ ಸಾಮ್ರಾಜ್ಯವನ್ನು ಕಟ್ಟಲು ಸಂಕಲ್ಪ ಮಾಡಿದ್ದೇ ಆಗ! 10-20 ವಿಧ ವಿಧವಾದ ದೋಸೆಗಳನ್ನು ಇಂಟರ್ನೆಟ್ ನೋಡಿ ಮಾಡಲು ಕಲಿತರು. ಚಟ್ನಿ ಮತ್ತು ಸಾಂಬಾರ್ ಕೂಡ ರುಚಿ ರುಚಿಯಾಗಿ ಮಾಡಲು ಕಲಿತರು. ಈ ಪ್ರಯೋಗವು ಗ್ರಾಹಕರಿಗೆ ಇಷ್ಟವಾಯಿತು. ಈಗ ಆರಂಭವಾದದ್ದು ಕಾರ್ಪೊರೇಟ್ ಜಗತ್ತಿನ ಕನಸು! ‘ದೋಸಾ ಪ್ಲಾಜಾ’ ಎಂಬ ಬ್ರಾಂಡ್ ನೇಮ್ ಆಗಲೇ ಸಿದ್ಧವಾಗಿತ್ತು.
ಮುಂಬೈ ಮಹಾನಗರದ ಬೃಹತ್ ಮಾಲ್ ಗಳಲ್ಲಿ ತನ್ನ ವಿಶೇಷವಾದ ಬ್ರಾಂಡ್ ರೆಸ್ಟೋರೆಂಟ್ ತೆರೆಯಬೇಕು ಎಂಬ ತೀವ್ರ ಕನಸು ಶುರು ಆಗಿತ್ತು. ಅದಕ್ಕಾಗಿ ಹಲವು ಕಡೆ ವಿಚಾರಿಸಿದರು, ಆಗ ಎಲ್ಲಾ ಮಾಲ್ ಗಳಲ್ಲಿ ಅಮೆರಿಕಾದ “ಮೆಕ್ಡೊನಾಲ್ಡ್ ರೆಸ್ಟೋರೆಂಟ್”ಗಳು ದೊಡ್ಡ ಸದ್ದು ಮಾಡುತ್ತಿದ್ದವು. ಅಪ್ಪಟ ಭಾರತದ್ದೇ ಆದ ಒಂದು ಬ್ರಾಂಡ್ ಅವರೊಂದಿಗೆ ಸ್ಪರ್ಧಿಸುವುದು ಸುಲಭದ ಮಾತಾಗಿರಲಿಲ್ಲ. ಕೊನೆಗೆ ವಾಶಿಯ ‘ಸೆಂಟರ್ ಒನ್ ಮಾಲ್ ನಲ್ಲಿ’ ಮೊದಲ ‘ದೋಸಾ ಪ್ಲಾಜಾ’ ಉದ್ಘಾಟನೆ ಆಯಿತು.
ಅದು ಕೇವಲ ದೋಸೆಗಳದ್ದೇ ಸಾಮ್ರಾಜ್ಯ! Sezwaan Dosa, Spring Roll Dosa, Panneer Chilli Dosa, Mashroom Dosa…. ಹೀಗೆ 107 ವಿಧವಾದ ದೋಸೆಗಳು ಸಿದ್ಧವಾದವು! ಐದು ಜನ ಗೆಳೆಯರು ಸೇರಿ ಒಂದೇ ದೋಸೆಯನ್ನು ತಿನ್ನುವ ಕಾಂಟಿನೆಂಟಲ್ ದೋಸೆ ಬಹಳ ಜನಪ್ರಿಯವಾಯಿತು. ಕೆಲವೇ ವರ್ಷಗಳಲ್ಲಿ DOSA PLAZA ಭಾರೀ ಮನ್ನಣೆ ಪಡೆಯಿತು. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ದೋಸೆಗಳು ರೆಡಿ ಆದವು.
ಈಗ ನಮ್ಮ ಮುಂದಿದೆ ಪ್ರೇಮ್ ಅವರ ರೋಚಕವಾದ ಯಶೋಗಾಥೆ! ಭಾರತದ ಹನ್ನೊಂದು ರಾಜ್ಯಗಳ 45 ಮಹಾನಗರಗಳಲ್ಲಿ DOSA PLAZA ಪ್ರಯೋಗ ಯಶಸ್ವಿ ಆಯಿತು. ನ್ಯೂಜಿಲ್ಯಾಂಡ್, ದುಬೈ, ಮಸ್ಕತ್, ಯುಎಇ…. ಮೊದಲಾದ ಏಳು ರಾಷ್ಟ್ರಗಳಲ್ಲಿ ಅವರ ಹೋಟೆಲುಗಳು ಇಂದು ಭಾರೀ ಕೀರ್ತಿಯನ್ನು ಪಡೆದಿವೆ!
ಬಾಂದ್ರಾ ಸ್ಟೇಷನ್ನಿನಲ್ಲಿ ಅಳುತ್ತಾ ನಿಂತಿದ್ದ ತಮಿಳು ಹುಡುಗ ಇಂದು ಜಾಗತಿಕ ಬ್ರಾಂಡ್ ಆಗಿದ್ದಾನೆ! ಅವರ ಇಂದಿನ ಬ್ರಾಂಡ್ ವೇಲ್ಯು ಮೂವತ್ತು ಕೋಟಿಗೂ ಅಧಿಕ!
‘ಕಠಿಣ ಪರಿಶ್ರಮ, ಗ್ರಾಹಕರ ಮನಸ್ಸನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಮತ್ತು ಬಹಳ ದೊಡ್ಡ ಕನಸು ಇಂದು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿವೆ’ ಎಂದು ಪ್ರೇಮ್ ಗಣಪತಿ ನಗುತ್ತ ಹೇಳುತ್ತಾರೆ. ಅವರ ಕಣ್ಣಿನಲ್ಲಿ ಗೆದ್ದ ಖುಷಿ ಇದೆ.

ಲೇಖನ – ಸಿಯಾ ಸಂತೋಷ್ ನಾಯಕ್, ರಾಜೇಂದ್ರ ಭಟ್ ಕೆ.

- Advertisement -
spot_img

Latest News

error: Content is protected !!