‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬುಧವಾರ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ ₹140.75 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಧೂಳೆಬ್ಬಿಸಿದೆ.
ನಾಲ್ಕೂವರೆ ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನೆಚ್ಚಿನ ನಟನನ್ನು ಬೆಳ್ಳಿತೆರೆಯಲ್ಲಿ ಕಂಡ ಅಭಿಮಾನಿಗಳು ಬೆಳ್ಳಂಬೆಳಗ್ಗೆಯೇ ಚಿತ್ರಮಂದಿರ ಹಾಗೂ ಮಾಲ್ಗಳಿಗೆ ಹರಿದುಬಂದು ಯಶ್ ಎಂಟ್ರಿ ಮತ್ತು ಟೈಟಲ್ ಕಾರ್ಡ್ಗೆ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಭಾರತೀಯ ಮಾರುಕಟ್ಟೆಯೊಂದರಲ್ಲೇ ಒಟ್ಟು 19,221 ಶೋಗಳಿಂದ ₹97.80 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಈ ಚಿತ್ರ, ಮೊದಲ ದಿನದ ಗಳಿಕೆಯಲ್ಲಿ ಶಾರುಖ್ ಖಾನ್ ಅವರ ‘ಜವಾನ್’ (2023) ಹಾಗೂ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (2025) ಸಿನಿಮಾಗಳ ದಾಖಲೆಯನ್ನು ಉಡಾಯಿಸಿದೆ. ಆದರೆ, ಭಾರತದ ನೆಟ್ ಕಲೆಕ್ಷನ್ ಹಾಗೂ ಜಾಗತಿಕ ಒಟ್ಟು ಗಳಿಕೆಯ ವಿಚಾರದಲ್ಲಿ ಯಶ್ ಅವರದ್ದೇ 2022ರ ಬ್ಲಾಕ್ಬಸ್ಟರ್ ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಕೊಂಚ ಹಿಂದೆ ಉಳಿದಿದೆ.
ವಿವಿಧ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಹಿಂದಿ ಆವೃತ್ತಿಯಲ್ಲಿ ಅಭೂತಪೂರ್ವ ಸಪೋರ್ಟ್ ಸಿಕ್ಕಿದ್ದು, ಮೊದಲ ದಿನವೇ ₹55 ಕೋಟಿಗೂ ಅಧಿಕ ಗಳಿಕೆ ತಂದುಕೊಟ್ಟಿದೆ. ಕನ್ನಡದಲ್ಲಿ ₹23.30 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದರೆ, ತೆಲುಗಿನಲ್ಲಿ ₹16 ಕೋಟಿ, ತಮಿಳಿನಲ್ಲಿ ₹5.50 ಕೋಟಿ ಹಾಗೂ ಮಲಯಾಳಂ ಆವೃತ್ತಿಯಲ್ಲಿ ₹1.30 ಕೋಟಿ ಗಳಿಕೆಯಾಗಿದೆ. ಮುಂಗಡ ಬುಕಿಂಗ್ನಲ್ಲೇ ಭಾರಿ ಸದ್ದು ಮಾಡಿದ್ದ ‘ಟಾಕ್ಸಿಕ್’, ಬಿಡುಗಡೆಯಾದ ಮೊದಲ ದಿನವೇ ₹100 ಕೋಟಿ ಕ್ಲಬ್ ಸೇರುವ ಮೂಲಕ ಯಶ್ ಅವರ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


