ಲಾಕ್ ಡೌನ್ ಕಾರಣ ಅನೇಕರು ಕುಟುಂಬಸ್ಥರಿಂದ ದೂರವಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ದಾರೆ. ಮತ್ತೆ ಕೆಲವರು ಈಗ್ಲೂ ಮನೆ ತಲುಪುವ ಪ್ರಯತ್ನ ಮುಂದುವರೆಸಿದ್ದಾರೆ. ಈ ಮಧ್ಯೆ ಮಹಾತಾಯಿಯೊಬ್ಬಳ ಸುದ್ದಿ ಸದ್ದು ಮಾಡಿದೆ. ಲಾಕ್ ಡೌನ್ ಕಾರಣ ಸಿಕ್ಕಿಬಿದ್ದಿದ್ದ ಮಗನನ್ನು ಮನೆಗೆ ಕರೆತರಲು 1400 ಕಿಲೋಮೀಟರ್ ಸ್ಕೂಟಿ ಓಡಿಸಿದ್ದಾಳೆ ತಾಯಿ.
ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. 50 ವರ್ಷದ ರಜಿಯಾ ಬೇಗಮ್ ಸೋಮವಾರ ಬೆಳಿಗ್ಗೆ ಆಂಧ್ರಪ್ರದೇಶದ ನೆಲ್ಲೂರಿಗೆ ಸ್ಥಳೀಯ ಪೊಲೀಸರ ಅನುಮತಿ ಪಡೆದು ಪ್ರಯಾಣ ಬೆಳೆಸಿದ್ದಾರೆ. ನೆಲ್ಲೂರು ಸುಮಾರು 700 ಕಿ.ಮೀ. ದೂರದಲ್ಲಿದೆ.
ಹೆದ್ದಾರಿಯಲ್ಲಿ ಸ್ಕೂಟಿ ಚಲಾಯಿಸಿ ನೆಲ್ಲೂರು ತಲುಪಿದ ಮಹಿಳೆ ಬುಧವಾರ ಸಂಜೆ ಮಗನ ಜೊತೆ ಮನೆಗೆ ವಾಪಸ್ ಆಗಿದ್ದಾಳೆ. ದಿನಕ್ಕೆ ಸುಮಾರು 470 ಕಿಲೋಮೀಟರ್ ಪ್ರಯಾಣ ಬೆಳೆಸಿದ ಮಹಿಳೆ ಮೂರು ದಿನಗಳಲ್ಲಿ 1400 ಕಿಲೋಮೀಟರ್ ಪ್ರಯಾಣ ಮುಗಿಸಿ ಮಗನನ್ನು ಮನೆಗೆ ಕರೆತಂದಿದ್ದಾಳೆ.
ಬೋದನ್ ನಗರದ ಎಸ್‌ಪಿ ಅವರ ಬಳಿ ಅನುಮತಿ ಪಡೆದುಕೊಂಡಿದ್ದ ರಜಿಯಾ, ತನ್ನ ಮಗನನ್ನು ಮನೆಗೆ ವಾಪಸ್ ಕರೆತರಲು ಸಾಧ್ಯವಾಯಿತು.ಹೋಗಿ ಬರುವ ವೇಳೆ ಹಲವು ಕಡೆ ಪೊಲೀಸರು ಅಡ್ಡ ಹಾಕಿದರು. ಆದರೆ, ನನ್ನ ಬಳಿ ಪಾಸ್ ಮತ್ತು ಪೊಲೀಸರ ಅನುಮತಿ ಪತ್ರ ಇದ್ದ ಕಾರಣ ಕಳುಹಿಸಿದರು ಎಂದು ರಜಿಯಾ ಹೇಳಿದ್ದಾರೆ.
ನೆಲ್ಲೂರಿನಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದ ರಜಿಯಾ, ಮಗನನ್ನು ನೋಡಿದ ತಕ್ಷಣ ಸಮಯ ವ್ಯರ್ಥ ಮಾಡದೆ, ಮತ್ತೆ ಹಿಂತಿರುಗಿದರು. ”ಮಗನನ್ನು ಯಾವಾಗ ನೋಡುತ್ತೇನೆ ಎಂಬ ಆತುರವೇ ಹೆಚ್ಚಿತ್ತು. ಅವನನ್ನು ನೋಡಿದ್ದು ನನಗೆ ಮತ್ತಷ್ಟು ಶಕ್ತಿ ನೀಡಿತು. ಹಾಗಾಗಿ, ಎಲ್ಲಿಯೂ ನಿಲ್ಲದೇ ಮತ್ತೆ ವಾಪಸ್ ಬಂದೆ” ಎಂದು ರಜಿಯಾ ತಿಳಿಸಿದ್ದಾರೆ.