ಬಂಟ್ವಾಳ: ಅಲ್ಲಿಪಾದೆ ನಿವಾಸಿ ಮಹಿಳೆಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಪಾಡಿ ಎಂಬಲ್ಲಿ ಅ.25ರ ಮಧ್ಯಾಹ್ನ ವೇಳೆ ನಡೆದಿದೆ.
ಮೀನಾಕ್ಷಿ ಪೂಜಾರಿ (70) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮೀನಾಕ್ಷಿ ಪೂಜಾರಿಯವರು ಅಲ್ಲಿಪಾದೆಯಿಂದ ಬಂದು ಸರಪಾಡಿಯಲ್ಲಿ ಅಂಗಡಿಯೊಂದಕ್ಕೆ ಹೋಗಿದ್ದಾರೆ. ನಂತರದಲ್ಲಿ ಅಲ್ಲಿಂದ ನೇರವಾಗಿ ನೇತ್ರಾವತಿ ನದಿ ಸಮೀಪ ಬಂದಿದ್ದಾರೆ ಎಂದು ಸರಪಾಡಿಯಿಂದ ಬರಿಮಾರು ಕಡವಿನ ಬಾಗಿಲಿಗೆ ಜನಸಾಗಿಸುವ ದೋಣಿಯ ನಾವಿಕ ತಿಳಿಸಿದ್ದಾರೆ. ನಾವಿಕನು ಮಹಿಳೆಯ ಹತ್ತಿರ ಕಡವಿನ ಬಾಗಿಲಿಗೆ ಬರುವವರಿದ್ದೀರಾ? ಎಂದು ಕೇಳಿದ್ದು, ಅವರು ನಾನು ಬರುವುದಿಲ್ಲ ಎಂದು ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ. ನಂತರ ನಾವಿಕ ದೋಣಿಯನ್ನು ಕಡವಿನ ಬಾಗಿಲಿಗೆ ಕೊಂಡುಹೋಗಿದ್ದು, ಕೆಲವೇ ಹೊತ್ತಿನಲ್ಲಿ ಇವರು ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆ ನದಿಗೆ ಹಾರುತ್ತಿರುವುದನ್ನು ಕಂಡ ಅಲ್ಲೇ ಇದ್ದಂತಹ ಮರಳು ತೆಗೆಯುತ್ತಿದ್ದ ಕಾರ್ಮಿಕರು ಕೂಡಲೇ ನದಿಗೆ ಹಾರಿ ಮಹಿಳೆಯನ್ನ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರ ಪ್ರಯತ್ನ ಫಲ ನೀಡದೆ ಆಕೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.


