Thursday, April 25, 2024
Homeಕರಾವಳಿವಿಟ್ಲ ಭಾಗದ ಜನತೆಯ ರಿಯಲ್ 'ಸಿಂಗಂ' ಎಸ್. ಐ ವಿನೋದ್ ರೆಡ್ಡಿ..

ವಿಟ್ಲ ಭಾಗದ ಜನತೆಯ ರಿಯಲ್ 'ಸಿಂಗಂ' ಎಸ್. ಐ ವಿನೋದ್ ರೆಡ್ಡಿ..

spot_img
- Advertisement -
- Advertisement -

ಪೋಲೀಸ್ ಅಧಿಕಾರಿಗಳೆಂದರೆ ಜನರಿಗೆ ನಂಬಿಕೆಗಿಂತ ಹೆಚ್ಚಾಗಿ ಭಯವೇ ತುಂಬಿರುತ್ತದೆ. ಆದರೆ ಇಲ್ಲೊಬ್ಬರು ಪೋಲೀಸ್ ಅಧಿಕಾರಿ ಇದ್ದಾರೆ. ಅವರು ಠಾಣೆಗೆ ಕರ್ತವ್ಯಕ್ಕೆ ಆಗಮಿಸಿದಾಗಿನಿಂದ ಠಾಣಾ ವ್ಯಾಪ್ತಿಯಲ್ಲಿ‌ ಸದಾ ಒಂದಲ್ಲೊಂದು ವಿನೂತನ ಕಾನೂನು ಪ್ರಯೋಗಗಳ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿದ್ದಾರೆ. ದಕ್ಷತೆ, ಕಾರ್ಯತತ್ಪರತೆ, ಪ್ರಾಮಾಣಿಕತೆಗೆ ಅನ್ವರ್ಥ ಇವರು. ವಿಟ್ಲ ಪೋಲೀಸ್ ಠಾಣೆಯ ಎಸ್.ಐ ವಿನೋದ್ ರೆಡ್ಡಿ ಯವರು.

ತನ್ನ ಅಧಿಕಾರ ವ್ಯಾಪ್ತಿಯುದ್ದಕ್ಕೂ ಸಾರ್ವಜನಿಕ ರೊಂದಿಗೆ ಪ್ರೀತಿಯಿಂದ ಬೆರೆತು, ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜನಸ್ನೇಹಿ ಪೋಲಿಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ಸಮರ್ಥ ಪೊಲೀಸ್ ಅಧಿಕಾರಿ.

ಯಾವುದೇ ತಪ್ಪೆಸಗದಿದ್ದರೆ, ಅನ್ಯಾಯ ಮಾಡದಿದ್ದರೆ ಎಸ್. ಐ. ವಿನೋದ್ ರೆಡ್ಡಿಯ ಮುಂದೆ ಹೋಗಲು ಯಾವ ಉನ್ನತ ವ್ಯಕ್ತಿಗಳ ಶಿಫಾರಸ್ಸೂ ಬೇಡ. ಅಂತಹವರ ಅಹವಾಲನ್ನು ಕೇಳಲು ವಿನೋದ್ ರೆಡ್ಡಿಯವರ ವಿಶಾಲವಾದ ಮಾನವೀಯ ಹೃದಯದ ಬಾಗಿಲು ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತದೆ. ಆ ಬಾಗಿಲನ್ನು ಪ್ರವೇಶಿಸಿದರೆ ಸಾಕು ಒಬ್ಬ ಉನ್ನತ ಪೋಲೀಸ್ ಅಧಿಕಾರಿಗಿಂತಲೂ‌ ಮಿಗಿಲಾಗಿ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಿ, ದುಃಖಿತನಿಗೆ ಧೈರ್ಯ ತುಂಬುವ ಅಂತಃಕರಣ ಹೊಂದಿರುವ ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾರೆ. ಅಸಹಯಕನಾದರೆ ಸ್ವಂತ ದುಡಿಮೆಯಿಂದಲೇ ನೆರವು ನೀಡಿ ನ್ಯಾಯ ಒದಗಿಸಿ ಕೊಡುವ ಮಾನವೀಯ ಗುಣವಂತ ಅಧಿಕಾರಿ ಎಸ್ ಐ ವಿನೋದ್ ರೆಡ್ಡಿಯವರು.

ತನ್ನ ಕರ್ತವ್ಯದ‌ ಪರಿಧಿಯನ್ನು ಮೀರಿ ಮಾನವೀಯತೆ ಹಾಗೂ ಸೇವೆಯೇ ಮಿಗಿಲೆನ್ನುವ ಅಚಲವಾದ ನಂಬಿಕೆ ರೆಡ್ಡಿಯವರದ್ದು.
ಕೊರೋನಾ ಹಾವಳಿಯಿಂದಾಗಿ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ತನ್ನ ಕಾರ್ಯಾವಧಿಗಿಂತ ದುಪ್ಪಟ್ಟಾಗಿ ದಿನದ 24 ಗಂಟೆಗಳನ್ನು ಬಿಡುವಿಲ್ಲದೇ, ಜೀವದ ಹಂಗು ತೊರೆದು ಸಾರ್ವಜನಿಕ ಸೇವೆಗೆ ಮೀಸಲಿಟ್ಟ ಅಧಿಕಾರಿ. ದಿನವೊಂದಕ್ಕೆ ಕನಿಷ್ಠ 250 ಕಿಲೋಮೀಟರ್ ವರೆಗೂ ತನ್ನ ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಿರತರಾಗಿ ತನ್ನ ಜನರ ಯೋಗಕ್ಷೇಮವನ್ನು ವಿಚಾರಿಸಿದ್ದು ಇವರ ಕಾರ್ಯಗಳಿಗೆ‌ ಹಿಡಿದ ಕೈಗನ್ನಡಿ.
ಒಂದೆರಡು ಪ್ರಕರಣವಲ್ಲ, ಹಲವಾರು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರೆಡ್ಡಿಯವರು ತನಿಖೆ ಮಾಡಿದ ಎಲ್ಲಾ ಪ್ರಕರಣಗಳಲ್ಲೂ ನಿಷ್ಪಕ್ಷಪಾತವಾಗಿ ನ್ಯಾಯ ದೊರೆತಿರುತ್ತದೆ.
ಸಾಮಾಜಿಕ ಬದ್ದತೆ ಇರುವ ಹಲವಾರು ಸಂಘಸಂಸ್ಥೆಗಳು, ಧಾರ್ಮಿಕ ಮುಖಂಡರುಗಳು, ರಾಜಕೀಯ ನೇತಾರರು ಹೀಗೆ ಎಲ್ಲರ ಒಕ್ಕೊರಲಿನ ಅಭಿಪ್ರಾಯವೂ ಇದೇ ರೀತಿಯಾಗಿದೆ.

ಒಬ್ಬ ಠಾಣಾ ಅಧಿಕಾರಿಯ ಬಗ್ಗೆ ಎಲ್ಲಾ ಧರ್ಮದ ಜನರು, ರಾಜಕೀಯ ಪಕ್ಷದ ನಾಯಕರುಗಳು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೆ ಆ ಅಧಿಕಾರಿಯ ಕಾರ್ಯಚಟುವಟಿಕೆಗಳು ಹೇಗಿರುತ್ತದೆ ಎಂಬುವುದು ಊಹಿಸಬಹುದಾಗಿದೆ.

ಪೋಲಿಸ್ ಠಾಣೆಗಳಲ್ಲಿ ನ್ಯಾಯವೆನ್ನುವುದು ಮರೀಚಿಕೆ ಎಂಬ ಅಪವಾದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ರೆಡ್ಡಿಯವರಂತಹ ಅಧಿಕಾರಿಗಳು ನ್ಯಾಯದ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿರುವುದರಿಂದ ಸಮಾಜದಲ್ಲಿ ಅನ್ಯಾಯಗಳನ್ನು ಸ್ವಲ್ಪ‌ಮಟ್ಟಿಗಾದರೂ ಮಟ್ಟ ಹಾಕಲು ಸಾಧ್ಯವಾಗಿದೆ.
ರೆಡ್ಡಿಯವರಿಗೆ ಸಮಾನವಾದ ನ್ಯಾಯ-ನೀತಿಯೇ‌ ಮುಖ್ಯ. ಅಪರಾಧಿ ಎಷ್ಟೇ ಬೆಂಬಲವನ್ನು ಹೊಂದಿರಲಿ, ಸಮಾಜದ ಪ್ರಭಾವಿ ವ್ಯಕ್ತಿಯೇ ಆಗಿರಲಿ ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸರಿಸಮಾನರು ಎಂಬುವುದು ರೆಡ್ಡಿಯವರ ದೃಷ್ಟಿಕೋನ. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವ ಹಾಗೂ ಆರೋಪಿ ಯಾವುದೇ ನಿರ್ಜನ ಪ್ರದೇಶದಲ್ಲಿ ಅಡಗಿ ಕುಳಿತರೂ ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳ ಒಳಗಡೆ ಹೆಡೆಮುರಿ ಕಟ್ಟಿ, ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವ ಗುಂಡಿಗೆ ಇರುವ ಸಮರ್ಥ ಅಧಿಕಾರಿಯೇ ಎಸ್ ಐ ವಿನೋದ್ ರೆಡ್ಡಿ.

ಅಕ್ರಮ-ಅವ್ಯವಹಾರಗಳ ಮುಂದೆ ರಾಜಿಯೇ ಇಲ್ಲ. ಹಣದ ಆಸೆಗೆ ಬಗ್ಗುವುದಿಲ್ಲ. ಯಾವುದೇ ರಾಜಕೀಯ ಒತ್ತಡಗಳು ಬಂದರೂ ಅದಕ್ಕೆ ಮುಂದೆ ಕಡ್ಡಿ ಮುರಿದಂತೆ ಖಡಕ್ ಉತ್ತರ ನೀಡುವುದರಿಂದಲೇ ರೆಡ್ಡಿ ಸಾಮಾನ್ಯ ಜನರಿಗೆ ಆಪತ್ಬಾಂಧವರಾಗಿದ್ದಾರೆ. ತನ್ನ ಕರ್ತವ್ಯದ ಸಣ್ಣ ಅವಧಿಯಲ್ಲೇ ಅತೀ‌ ಹೆಚ್ಚು ಅಭಿಮಾನಿಗಳನ್ನು ಗಳಿಸಿ ‘ವಿಟ್ಲದ ಸಿಂಗಂ’ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.

ಇಂತಹ ಅಧಿಕಾರಿಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ. ಅಂದರೆ ಇದು ಪ್ರಚಾರವಲ್ಲ. ರಾಜ್ಯದ ಪ್ರತಿಯೊಂದು ಪೋಲಿಸ್ ಠಾಣೆಯ ಅಧಿಕಾರಿಗಳಿಗೂ ರೆಡ್ಡಿಯವರು ಮಾದರಿ. ಜನಸ್ನೇಹಿ ಪೋಲಿಸ್ ವ್ಯವಸ್ಥೆ ಎಂದರೇನು? ಪೋಲಿಸ್ ಇಲಾಖೆಯಲ್ಲಿ ಪಾರದರ್ಶಕತೆಯನ್ನೂ, ಭಯಮುಕ್ತ ವಾತಾವರಣವನ್ನೂ ನಿರ್ಮಿಸುವುದು ಹೇಗೆ? ಎಂಬುವುದಕ್ಕೆ ವಿಟ್ಲ ಪೋಲಿಸ್ ಠಾಣೆ ಹಾಗೂ ಅಲ್ಲಿನ ದಿಟ್ಟ ಅಧಿಕಾರಿಗಳೇ ಒಂದು ಉತ್ತಮ ನಿದರ್ಶನ.

Article by : Kodakkal Shivaprasad

- Advertisement -
spot_img

Latest News

error: Content is protected !!