2019ರ ಫೆಬ್ರವರಿಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಪಾಕಿಸ್ತಾನದ ವಾಯುಪಡೆಯ ಯುದ್ಧವಿಮಾನವನ್ನು ಹೊಡೆದುರುಳಿಸಿ, ಶತ್ರುಪಡೆಯ ವಶದಲ್ಲಿದ್ದಾಗ ಅಪ್ರತಿಮ ಧೈರ್ಯ ಪ್ರದರ್ಶಿಸಿದ್ದ ಭಾರತೀಯ ವಾಯುಪಡೆಯ (IAF) ವೀರಚಕ್ರ ಪುರಸ್ಕೃತ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರು ಕಮರ್ಷಿಯಲ್ ಪೈಲಟ್ ಆಗಿ ತಮ್ಮ ಹೊಸ ವೃತ್ತಿಜೀವನವನ್ನು ಆರಂಭಿಸಿದ್ದಾರೆ.
22 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ವಾಯುಪಡೆಯಿಂದ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿರುವ ಅವರು, ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ FLY91 ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ PTI ವರದಿ ಮಾಡಿದೆ.
ಅಭಿನಂದನ್ ಅವರು ಕಳೆದ ಆಗಸ್ಟ್‌ನಲ್ಲಿಯೇ ಈ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆಯಾದರೂ, ಈ ಬಗ್ಗೆ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವೈಯಕ್ತಿಕ ಗೌಪ್ಯತೆಯ ಹಿನ್ನೆಲೆಯಲ್ಲಿ ಸಂಸ್ಥೆಯ ವಕ್ತಾರರೂ ಕೂಡ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮಾರ್ಚ್ 2024 ರಿಂದ ಕಾರ್ಯಾಚರಣೆ ಆರಂಭಿಸಿರುವ FLY91 ಸಂಸ್ಥೆಯು ಸದ್ಯ ಆರು ATR 72-600 ವಿಮಾನಗಳನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್ ಅನ್ನು ತನ್ನ ಪ್ರಮುಖ ಕೇಂದ್ರಗಳನ್ನಾಗಿ ಮಾಡಿಕೊಂಡು ಸೇವೆ ಒದಗಿಸುತ್ತಿದೆ. ದೇಶದ ಧೀರ ಯೋಧನೊಬ್ಬ ಈಗ ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.


