Friday, April 19, 2024
HomeUncategorizedಮಂಗಳೂರು: ನಾಲ್ವರನ್ನು ಹತ್ಯೆಗೈದವನಿಗೆ 28 ವರ್ಷಗಳ ಬಳಿಕ ಸಿಗುತ್ತಿದೆ ಬಿಡುಗಡೆ ಭಾಗ್ಯ: ಹತ್ಯೆಗೊಳಗಾದವರ ಕುಟುಂಬದವರಿಂದ ಅಪರಾಧಿಯ...

ಮಂಗಳೂರು: ನಾಲ್ವರನ್ನು ಹತ್ಯೆಗೈದವನಿಗೆ 28 ವರ್ಷಗಳ ಬಳಿಕ ಸಿಗುತ್ತಿದೆ ಬಿಡುಗಡೆ ಭಾಗ್ಯ: ಹತ್ಯೆಗೊಳಗಾದವರ ಕುಟುಂಬದವರಿಂದ ಅಪರಾಧಿಯ ಬಿಡುಗಡೆಗೆ ತೀವ್ರ ವಿರೋಧ

spot_img
- Advertisement -
- Advertisement -

ಮಂಗಳೂರು: 28 ವರ್ಷಗಳ ಹಿಂದೆ ಮಂಗಳೂರಿನ ವಾಮಂಜೂರಿನಲ್ಲಿ ನಾಲ್ವರನ್ನು ಕೊಲೆಗೈದಿದ್ದ ಅಪರಾಧಿಗೆ ಇದೀಗ 28 ವರ್ಷಗಳ ಬಳಿಕಕ ಬಿಡುಗಡೆ ಭಾಗ್ಯ ಸಿಗುತ್ತಿದೆ. ಆದರೆ ಈತನ ಬಿಡುಗಡೆಗೆ ಕೊಲೆಯಾಯದವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?: 1994 ಫೆಬ್ರವರಿ 23 ರಂದು ಉಪ್ಪಿನಂಗಡಿ ನಿವಾಸಿಯಾಗಿದ್ದ ಪ್ರವೀಣ್ ಎಂಬಾತ ಮಂಗಳೂರಿನ ವಾಮಂಜೂರಿನಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಸಿಂಗಲ್ ನಂಬರ್ ಲಾಟರಿಯ ಚಟ ಅಂಟಿಸಿಕೊಂಡಿದ್ದ, ಪ್ರವೀಣ ಊರು ತುಂಬಾ ಸಾಲ ಮಾಡಿದ್ದ. ಜೊತೆಗೆ ಕುಡಿತದ ದಾಸನಾಗಿದ್ದ. ಹೀಗೆ ಸಂಬಂಧಿಕರ ಮನೆಗೆ ಹೋಗಿದ್ದ ಪ್ರವೀಣ ಅಂದು ಕಂಠ ಪೂರ್ತಿ ಕುಡಿದಿದ್ದ. ಕ್ಷಣ ಕ್ಷಣಕ್ಕೂ ಹಣಕ್ಕೆ ಏನು ಮಾಡೋದು ಅಂತಾ ಯೋಚಿಸ್ತಿದ್ದ. ಹೀಗಿರುವಾಗ ಮನೆ ಮಂದಿಯೆಲ್ಲಾ ಮಲಗಿದ್ದಾಗ ಪ್ರವೀಣ ಮಾಡಬಾರದ ಕೆಲ್ಸಕ್ಕೆ ಕೈ ಹಾಕಿದ್ದ. ಗಾಢ ನಿದ್ರೆಯಲ್ಲಿದ್ದ ಮನೆಯವರನ್ನೆಲ್ಲಾ ಹಾರೆಯ ಹಿಡಿಯಿಂದ ಕೊಂದು ಹಾಕಿದ್ದ. ಅಂದು ತಾವು ಮಾಡದ ತಪ್ಪಿಗೆ ಅಪ್ಪಿ ಶೇರಿಗಾರ್ತಿ(75),ಅವರ ಪುತ್ರಿ ಶಕುಂತಲಾ(36), ಮೊಮ್ಮಗಳು ದೀಪಿಕಾ (6),ಅಪ್ಪಿ ಅವರ ಪುತ್ರ ಗೋವಿಂದ (30) ಪ್ರಾಣ ತೆತ್ತಿದ್ದರು. ಮನೆಯವರನ್ನು ಮುಗಿಸಿದ ಪ್ರವೀಣ ಚಿನ್ನಾಭರಣ ಹಾಗೂ ದುಡ್ಡಿನೊಂಡಿಗೆ ಪರಾರಿಯಾಗಿದ್ದ.

ಈ ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಆರಂಭದಲ್ಲಿ ಇದು ಯಾರೋ ದರೋಡೆಕೋರರ ಗ್ಯಾಂಗ್ ನ ಕೃತ್ಯ ಅಂತಾ ಅನ್ನಿಸಿತ್ತು. ಆದರೆ ಸ್ಥಳದಲ್ಲಿ ಸಿಕ್ಕ ಖೋಡೇಸ್ ರಮ್ ನ ಬಾಟಲಿ ಪೊಲೀಸರನ್ನು ಪ್ರವೀಣನ ಬಳಿ ತಂದು ನಿಲ್ಲಿಸಿತ್ತು. ಸಾಕಷ್ಟು ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರವೀಣ ಖೋಡೇಸ್ ರಮ್ ಕುಡಿಯುತ್ತಿದ್ದ. ಹಾಗಾಗಿ ಆತನನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದ.         

ಕೋರ್ಟ್ ಗೆ ಕರೆ ತರುವಾಗ ತಪ್ಪಿಸಿಕೊಂಡು ಹೋಗಿ ವಿವಾಹವಾಗಿದ್ದ ಖತರ್ನಾಕ್

ಬಳಿಕ ಪ್ರವೀಣ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದ. 1997 ರಲ್ಲಿ ಪ್ರಕರಣದ ವಿಚಾರಣೆಗಾಗಿ ಪ್ರವೀಣನನ್ನು ಮಂಗಳೂರಿಗೆ ಕರೆ ತರುತ್ತಿದ್ದಾಗ ಆತ ಹುಬ್ಬಳ್ಳಿಯಲ್ಲಿ ಊಟಕ್ಕೆ ನಿಲ್ಲಿಸಿದ್ದ ವೇಳೆ ಪರಾರಿಯಾಗಿದ್ದ. ಇದೇ ವೇಳೆ ಪ್ರವೀಣ ವಾಪಾಸ್ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೆದರಿದ ಆತನ ಮನೆಯವರು ಆತನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಿಸಿದ್ದರು. ಆದರೆ ತಪ್ಪಿಸಿಕೊಂಡು ಹೋದ ಪ್ರವೀಣ ಗೋವಾಗೆ ಹೋಗಿ ಅಲ್ಲಿ ಪ್ರೀತಿಸಿ ಯುವತಿಯೊಬ್ಬಳನ್ನು ವಿವಾಹವಾಗಿದ್ದ.1999ರಲ್ಲಿ ಮಂಗಳೂರಿನ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಗೋವಾದಲ್ಲಿ ಪತ್ತೆ ಹಚ್ಚಿ ಬಂಧಿಸಿತ್ತು.

ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಲಿರುವ ಪ್ರವೀಣ

ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.ಹೈಕೋರ್ಟ್ ಕೂಡ ಇದೇ ತೀರ್ಪನ್ನು ಎತ್ತಿ ಹಿಡಿದಿತ್ತು.ಬಳಿಕ 2003ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ರಾಷ್ಟ್ರಪತಿಗೆ ಸಲ್ಲಿಸಿದ್ದ ಅರ್ಜಿಯನ್ನೂ ಅವರು ವಜಾಗೊಳಿಸಿದ್ದರು. ಆದರೆ 2014ರಲ್ಲಿ ಸುಪ್ರೀಂ ಕೋರ್ಟ್ ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದೀಗ ಸದ್ಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಸನ್ನಡತೆ ಆಧಾರದ ಮೇಲೆ 62 ವರ್ಷದ ಪ್ರವೀಣ್ ನನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈತನ ಬಿಡುಗಡೆಗೆ ಕೊಲೆಯಾದವರ ಕುಟುಂಬದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರವೀಣ್ ಗೆ ಬಿಡುಗಡೆ ಮಾಡದಂತೆ ಕುಟುಂಬಸ್ಥರು ಡಿಜಿಪಿ ಮತ್ತು ಮಂಗಳೂರು ಪೊಲೀಸ್‌ ಕಮಿಷನರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

- Advertisement -
spot_img

Latest News

error: Content is protected !!