Thursday, June 4, 2026
Homeಕರಾವಳಿಕೊರೊನಾ ಪರಿಹಾರ ಹಣದ ನೆಪದಲ್ಲಿ ಬಂಟ್ವಾಳದ ವೃದ್ಧೆಯ ಕಿವಿಯೋಲೆ ದೋಚಿದ ಅಪರಿಚಿತ

ಕೊರೊನಾ ಪರಿಹಾರ ಹಣದ ನೆಪದಲ್ಲಿ ಬಂಟ್ವಾಳದ ವೃದ್ಧೆಯ ಕಿವಿಯೋಲೆ ದೋಚಿದ ಅಪರಿಚಿತ

- Advertisement -
- Advertisement -

ಬಂಟ್ವಾಳ: ಹೇಗೆಲ್ಲಾ ಮೋಸ ಮಾಡ್ಬೋದು ಅನ್ನೋ ದಾರಿ ಹುಡುಕುತ್ತಲೇ ಇರುವ ವಂಚಕರು ಅದಕ್ಕಾಗಿ ಸಾವಿರಾರು ದಾರಿಗಳನ್ನು ಕಂಡು ಕೊಳ್ಳುತ್ತಾರೆ. ಅದೇ ರೀತಿ ಕೊರೊನಾ ಪರಿಹಾರ ಹಣ ಬಂದಿದೆ ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ನ ಮಿನಿ ವಿಧಾನಸೌಧದಲ್ಲಿ ವೃದ್ಧೆಯೊಬ್ಬರ ಆಭರಣವನ್ನು ಅಪರಿಚಿತನೊಬ್ಬ ಎಗರಿಸಿ ಎಸ್ಕೇಪ್ ಆಗಿದ್ದಾನೆ.

ಇಂದು ಬೆಳಗ್ಗೆ ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಅವರು ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಗೆ ವಿದ್ಯುತ್ ಬಿಲ್ ಪಾವತಿ ಮಾಡಲು ಬಂದಿದ್ದರು. ಬಿಲ್ ಪಾವತಿ ಮಾಡಿ ವಾಪಸು ತೆರಳುವ ವೇಳೆ ಅನಾಮಿಕ ವ್ಯಕ್ತಿಯೋರ್ವ ಜಯಂತಿ ಅವರ ಬಳಿ ತನ್ನನ್ನು ಪರಿಚಯ ಮಾಡಿಕೊಂಡು, ತಾನು ಶೀನಪ್ಪ ಅವರ ಮಗ ಸಂತೋಷ ಎಂದು ಹೇಳಿ ನಂಬಿಸಿದ್ದಾನೆ. ನಿಮಗೆ ಕೋವಿಡ್ ನಿಂದಾಗಿ ಒಂದೂವರೆ ಲಕ್ಷ ಹಣ ಪರಿಹಾರವಾಗಿ ಬಂದಿದೆ. ಅದನ್ನು ಪಡೆಯಲು ಕನಿಷ್ಟ ಹತ್ತು ಸಾವಿರ ಹಣ ಕಟ್ಟಬೇಕಾಗುತ್ತದೆ. ನೀವು ಆಧಾರ್ ಕಾರ್ಡ್ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾನೆ.

ವೃದ್ಧೆ ಆಧಾರ್ ಕಾರ್ಡ್ ತಂದಿಲ್ಲ ಎಂದಾಗ ನೀವು ಮಿನಿ ವಿಧಾನಸೌಧಕ್ಕೆ ಬನ್ನಿ, ಅಲ್ಲಿ ಅರ್ಜಿ ನೀಡಬೇಕು ಎಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಹತ್ತು ಸಾವಿರ ಕೇಳಿದಾಗ ನನ್ನ ಬಳಿ ಇಲ್ಲ ಮಗನ ಕೇಳಿ ಕೊಡುತ್ತೇನೆ ಮಹಿಳೆ ಹೇಳಿದಾಗ, “ಮಗನಿಗೆ ನಾನು ಪೋನ್ ಮಾಡಿದೆ, ಅವನಲ್ಲಿ ಹಣ ಇಲ್ಲವಂತೆ, ನಿಮ್ಮಲ್ಲಿರುವ ಕಿವಿಯ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ” ಎಂದು ಮಹಿಳೆಯನ್ನು ನಂಬಿಸಿದ್ದಾನೆ.

ಆತನ ಮಾತುಗಳನ್ನು ನಂಬಿದ ಆಕೆ ಕೂಡಲೇ ಕಿವಿಯ ಬೆಂಡೋಲೆಯನ್ನು ತೆಗೆದು ಕೊಟ್ಟಿದ್ದಾರೆ. ಆದರೆ ಬಂಗಾರ ಪಡೆದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಪರಿಚಿತ ವ್ಯಕ್ತಿ ಬಂಗಾರ ಪಡೆದು ಹೋದ ಮೇಲೆ ಮಹಿಳೆ ಮಿನಿ ವಿಧಾನಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮಗನಿಗೆ ತಾಯಿಯನ್ನು ಮೋಸಗೊಳಿಸಿ ಬಂಗಾರ ಎಗರಿಸಿರುವ ಬಗ್ಗೆ ತಿಳಿದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!