ಚಿಕ್ಕೋಡಿ: ತಪ್ಪು ಮಾಡಿದ ಆರೋಪಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಸಾಂಪ್ರದಾಯಿಕ ಶೈಲಿಗೆ ಹೊರತಾಗಿ, ಪರಿಸರ ಸಂರಕ್ಷಣೆಗೆ ಪೂರಕವಾದ ವಿಭಿನ್ನ ತೀರ್ಪೊಂದನ್ನು ನೀಡುವ ಮೂಲಕ ಚಿಕ್ಕೋಡಿಯ JMFC ನ್ಯಾಯಾಲಯ ಗಮನ ಸೆಳೆದಿದೆ. ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಎಬ್ಬಿಸಿದ್ದ ವ್ಯಕ್ತಿಯೊಬ್ಬನಿಗೆ ಕೋರ್ಟ್ 50 ಗಿಡಗಳನ್ನು ನೆಡುವಂತೆ ಅಪರೂಪದ ಶಿಕ್ಷೆ ವಿಧಿಸಿದೆ.
ತಾಲೂಕಿನ ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತನೇ ಈ ವಿಶಿಷ್ಟ ಶಿಕ್ಷೆಗೆ ಭಾಜನರಾದ ಆರೋಪಿ. ತನ್ನ ಮೇಲಿದ್ದ ಗಲಾಟೆ ಪ್ರಕರಣದ ವಿಚಾರಣೆ ವೇಳೆ ಆರೋಪಿಯು ಕೋರ್ಟ್ ಮುಂಭಾಗ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆತನಿಗೆ ಸಮಾಜಮುಖಿ ಶಿಕ್ಷೆ ವಿಧಿಸಿ ಆದೇಶಿಸಿದರು.
ನ್ಯಾಯಾಲಯದ ನಿರ್ದೇಶನದಂತೆ ಆರೋಪಿ ಅನಿಲ, ತನ್ನ ಪತ್ನಿಯೊಂದಿಗೆ ಆಗಮಿಸಿ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಹಾಗೂ ಸದಲಗಾ ಪೊಲೀಸ್ ಠಾಣೆಯ ಆವರಣದಲ್ಲಿ 25 ಸಸಿಗಳನ್ನು ನೆಟ್ಟು, ಕೋರ್ಟ್ ಆದೇಶವನ್ನು ಶಿರಸಾವಹಿಸಿ ಪಾಲಿಸಿದ್ದಾನೆ.
ಶಿಕ್ಷೆಯ ನೆಪದಲ್ಲಿ ಪರಿಸರ ಬೆಳೆಸುವಂತಹ ರಚನಾತ್ಮಕ ತೀರ್ಪು ನೀಡಿದ ಚಿಕ್ಕೋಡಿ ನ್ಯಾಯಾಲಯದ ಈ ನಡೆಯನ್ನು ಸಾರ್ವಜನಿಕರು ಹಾಗೂ ಕಾನೂನು ವಲಯದ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


