ಉಜಿರೆ: ನಿನ್ನೆ ತಡರಾತ್ರಿ ಉಜಿರೆಯ ಹಳ್ಳಿ ಮನೆ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಾರ್ ಮಾಲೀಕರ ಸ್ನೇಹಿತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಎರಡು ಗುಂಪಿನವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನ ಸಾರಾಂಶ ಹೀಗಿದೆ..
ಬಿಜೆಪಿ ಕಾರ್ಯಕರ್ತರ ದೂರಿನ ಸಾರಾಂಶ:
ದಿನಾಂಕ: 13-07-2020ರಂದು ಸಾಯಂಕಾಲ ಬಿಜೆಪಿ ಕಾರ್ಯಕರ್ತರಾದ ಗಿರೀಶ್, ಪಿ ಸಂದೇಶ್ ಮತ್ತು ಬಾಲಕೃಷ್ಣ ಶೆಟ್ಟಿ ಎಂಬವರು ಹಳ್ಳಿಮನೆ ರೆಸ್ಟೋರೆಂಟ್ ಹೋಗಿ ಒಂದೊಂದು ಬಿಯರ್ ಹಾಗೂ ಆಹಾರ ಪದಾರ್ಥ ಸೇವಿಸಿ ಬಳಿಕ ಬಿಲ್ಲು ನೀಡುವ ಸಮಯ ಆರೋಪಿ ಮತ್ತು ಹಳ್ಳಿಮನೆಯ ಮಾಲೀಕ ಪ್ರವೀಣ್ ಫೆರ್ನಾಂಡಿಸ್, ದೂರುದಾರ ಗಿರೀಶ್ ಎಂಬವರ ಕಿಸೆಯಲ್ಲಿ ಹಣವನ್ನು ನೋಡಿ “ ನಿನ್ನಲ್ಲಿ ತುಂಬಾ ಹಣ ಇದೆ “ ಎಂದು ಹೇಳಿದಾಗ ಇದು ತನ್ನ ಮನೆಯ ಸಾಮಾಗ್ರಿ ಖರೀದಿಸಲು ತಂದ ಹಣ ಎಂದು ಹೇಳಿದ್ದು ಬಳಿಕ ಬಿಲ್ಲಿನ ಮೊತ್ತವನ್ನು ಪಾವತಿಸಿ ಸಮಯ ಸುಮಾರು 19.30ಗಂಟೆಯಿಂದ 19.45ಗಂಟೆಯ ಮದ್ಯದ ಅವಧಿಯಲ್ಲಿ ಹೊಟೆಲಿನಿಂದ ಹೊರಗೆ ಬಂದಾಗ ರೆಸ್ಟೋರೆಂಟ್‌ನ ಹೊರಗೆ ಎದುರುಭಾಗದಲ್ಲಿ ಆರೋಪಿಗಳಾದ ಪ್ರವೀಣ್ ಅವರ ಜೊತೆಯಲ್ಲಿ ಮನೋಜ್ ಕುಂಜರ್ಪ,ರಂಜನ್ ಕಡಂಬು, ಪ್ರಜ್ವಲ್ ಗೌಡ ಕಳ್ಮಂಜ, ಗಣೇಶ್ ಶೆಟ್ಟಿ ಕುಂಟಿನಿ, ಶರತ್ ಕುಂಜರ್ಪ ಮತ್ತು ಇತರರು ಬಂದು ಗಿರೀಶ್ ಮತ್ತು ಅವರ ಜೊತೆಯಲ್ಲಿದ್ದ ಸಂದೇಶ್ ಹಾಗೂ ಬಾಲಕೃಷ್ಣ ಶೆಟ್ಟಿಯವರನ್ನು ಅಡ್ಡಗಟ್ಟಿ ಕೈಗಳಿಂದ ಹಲ್ಲೆ ನಡೆಸಿ ಕಾಲುಗಳಿಂದ ತುಳಿದು ಉರುಡಾಟ ನಡೆಸಿ ಗಿರೀಶ್ ಅವರ ಪ್ಯಾಂಟಿನ ಎಡಬದಿ ಮುಂಬದಿ ಜೇಬಿನಲ್ಲಿದ್ದ ರೂ 1,98,000/- ನಗದನ್ನು ಎಳೆದು ತೆಗೆದಿರುವುದಲ್ಲದೆ, ಗಿರೀಶ್ ಅವರ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್ ತೂಕದ ಬಂಗಾರದ ಚೈನ್‌ನ್ನು ಎಳೆದು ತೆಗೆದಿರುವುದಲ್ಲದೆ ಗಿರೀಶ್’ರ ಜೊತೆಯಲ್ಲಿದ್ದ ಸಂದೇಶ್ ರವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಎಳೆದುಕೊಂಡಿದ್ದು ಈ ಬಗ್ಗೆ ಪೊಲೀಸು ಕಂಪ್ಲೇಂಟ್ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳ ಕೃತ್ಯದಿಂದ ಗಿರೀಶ್’ರ ಸೊಂಟಕ್ಕೆ ಹಾಗೂ ಎಡಕೈಗೆ ಒಳನೋವು, ಸಂದೇಶ್ ರವರ ಬೆನ್ನಿಗೆ ಮತ್ತು ಎಡಕೈಗೆ ಒಳನೋವು ಹಾಗೂ ಬಾಲಕೃಷ್ಣ ಶೆಟ್ಟಿಯವರ ಬಲಕೈಗೆ ರಕ್ತಗಾಯ ಹಾಗೂ ಎಡಕಿವಿಗೆ ಒಳನೋವು ಉಂಟಾಗಿರುತ್ತದೆ. ಆರೋಪಿತರು ದೋಚಿದ ಚಿನ್ನಾಭರಣದ ಅಂದಾಜು ಮೌಲ್ಯ ರೂ 1,50,000 ಹಾಗೂ ನಗದು ರೂ. 1,98,000 ಆಗಿರುತ್ತದೆ ಎಂದು ದೂರು ನೀಡಿದ್ದಾರೆ.
ರೆಸ್ಟೋರೆಂಟ್ ನ ಮಾಲೀಕ ಪ್ರವೀಣ್ ಫೆರ್ನಾಂಡಿಸ್ ರ ಪತ್ನಿ ಸವಿತಾ ಬ್ಯಾಪ್ಟೀಸ್ಟ್ ನೀಡಿರುವ ದೂರಿನ ಸಾರಾಂಶ:
ಶ್ರೀಮತಿ ಸವಿತಾ ಬ್ಯಾಪ್ಟೀಸ್ಟ್ ಅವರ ಪಾಲುದಾರ ಸಂಸ್ಥೆಯಾದ ಹಳ್ಳಿ ಮನೆ ರೆಸಾರ್ಟ್ ನಲ್ಲಿ ನಿನ್ನೆ ದಿನ ದಿನಾಂಕ:13-07-2020 ರಂದು ಇದ್ದ ಸಮಯ ಆರೋಪಿಗಳು ಬೆಳಿಗ್ಗೆ 11-30 ಗಂಟೆಯಿಂದ 19-00 ಗಂಟೆಯ ಮದ್ಯೆ ಕ್ರಮವಾಗಿ 3 ಬಾರಿಯಾಗಿ ರೆಸಾರ್ಟ್ ಹೋಗಿ ಪಿರ್ಯಾದಿ ದಾರರಲ್ಲಿ ಡ್ರಿಂಕ್ಸ್ ಮತ್ತು ಪುಡ್ ಕೇಳಿದ್ದು, ಈ ಸಮಯದಲ್ಲಿ ಸವಿತಾ ಬ್ಯಾಪ್ಟೀಸ್ಟ್ ಹಾಗೂ ಅವರ ಗಂಡ ಪ್ರವೀಣ್ ಫೆರ್ನಾಂಡಿಸ್ ರೆಸಾರ್ಟ್ ನಲ್ಲಿ ಆರೋಪಿಗಳಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿಲ್ಲ ಅನ್ನುವ ಕಾರಣಕ್ಕೆ ಆರೋಪಿಗಳು ಸವಿತಾ ಬ್ಯಾಪ್ಟೀಸ್ಟ್ ರನ್ನು ಉದ್ದೇಶಿಸಿ ”ಇಂಬಿಯೇ ಪೊರ್ಬು ಆದ್ ಮಾತೆಟ್ಲ ಎದುರು ಉಂತುಬೆ ಎಂಕ್ಲೆನ ಜವಾನಿ ಯೆರ್ ನ ಭಾರಿ ಸಪೊರ್ಟ್ ಉಂಡು ಇಂಬಿಯಗ್ ಪೆಟ್ಟ್ ಪಾಡಂದೆ ಎಂಕ್ಲ್ ಮುಲ್ಪರ್ದ್ ಪೋಪುಜ” ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದುದ್ದಲ್ಲದೇ ರೆಸಾರ್ಟ್ ನಿಂದ ಹೋಗುವಂತೆ ತಿಳಿಸಿದ ಮಾಲೀಕ ಪ್ರವೀಣ್ ಫೆರ್ನಾಂಡಿಸ್ ರನ್ನು ಗಿರೀಶ್ ಎಂಬಾತನು ಕೈಯಿಂದ ದೂಡಿ ಅಡ್ಡ ಬಂದ ಪಿರ್ಯಾದಿದಾರರ ಮೈಗೆ ಕೈ ಹಾಕಿ ದೂಡಿದ್ದು, ಪರಿಣಾಮ ಪಿರ್ಯಾದಿದಾರರ ಕೌಂಟರ್ ನ ಟೇಬಲ್ ಬಳಿ ಬಿದ್ದು, ಅವರ ಬಲ ಕೈಯ ಮೊಣಗಂಟಿಗೆ ಜಜ್ಜಿದ ಒಳಗಾಯವಾಗಿರುತ್ತದೆ ಎಂದು ದೂರು ದಾಖಲಾಗಿದೆ.


