ಉಡುಪಿ: ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆರ್ಡೂರು ಹಿಂದು ಜಾಗರಣಾ ವೇದಿಕೆಯ ನಾಯರ್‌ಕೋಡು ಘಟಕದ ಪ್ರದೀಪ್ ಪೂಜಾರಿ(26) ಯನ್ನು ಬಂಧಿಸಲಾಗಿದೆ.
ಈತ ಯುವತಿಯೊಬ್ಬಳನ್ನು ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿದ್ದು ಆಕೆ ಆತನೊಂದಿಗೆ ಮದುವೆಗೆ ನಿರಾಕರಿಸಿದ್ದಳು. ಈ ಬಗ್ಗೆ ಆಕೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು.ಮತ್ತೆ ಅದೇ ದ್ವೇಷದಲ್ಲಿ ಪ್ರದೀಪ್ ಪೂಜಾರಿ, ನ.29ರಂದು ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಆ ಯುವತಿಯನ್ನು ಅಡ್ಡಗಟ್ಟಿ ಮತ್ತೆ ಮದುವೆಯಾಗುವಂತೆ ಪೀಡಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯನ್ನು ಅಲ್ಲೇ ಕತ್ತು ಹಿಸುಕಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಆಕೆ ಮನೆಯವರಿಗೆ ಮಾಹಿತಿ ನೀಡಿದ್ದು, ಅದರಂತೆ ಪೋಷಕರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ


