
ಉಡುಪಿ: ಮನೆಯಲ್ಲಿ ಬಟ್ಟೆ ಇಡುವ ಕ್ಷುಲ್ಲಕ ವಿಚಾರಕ್ಕೆ ಸಹೋದರಿಯರ ನಡುವೆ ನಡೆದ ಜಗಳಕ್ಕೆ ತಾಯಿ ಬೈದಿದ್ದರಿಂದ ಮನನೊಂದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ. ಬೆಳ್ಳಾಲ ಗಂಗಮಾತಾ ನಿವಾಸಿ ಪ್ರಭಾಕರ ನಾಯಕ್ ದಂಪತಿಯ ಪುತ್ರಿ, ಕುಂದಾಪುರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಪ್ರಮಿತಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಆಗಸ್ಟ್ 6ರಂದು ಬೆಳಗಿನ ಜಾವ ಕೊಠಡಿಯಲ್ಲಿ ಬಟ್ಟೆ ಇಡುವ ವಿಚಾರವಾಗಿ ಪ್ರಮಿತಾ ಹಾಗೂ ಆಕೆಯ ತಂಗಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ತಾಯಿ ಇಬ್ಬರಿಗೂ ಬೈದಿದ್ದರೆನ್ನಲಾಗಿದೆ. ಇದರಿಂದ ಸಿಟ್ಟು ಮಾಡಿಕೊಂಡ ಪ್ರಮಿತಾ ಕೊಠಡಿಯ ಬಾಗಿಲು ಹಾಕಿಕೊಂಡಿದ್ದಳು. ಬೆಳಿಗ್ಗೆ 8:30ರ ಸುಮಾರಿಗೆ ಮನೆಯವರು ಕಿಟಕಿಯಿಂದ ನೋಡಿದಾಗ ಆಕೆ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.ಈ ಕುರಿತು ಮೃತರ ತಾಯಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


