Tuesday, June 9, 2026
Homeಕರಾವಳಿಉಡುಪಿಉಡುಪಿ; ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ; ಅಪ್ಪ ಮಗನಿಗೆ 20 ವರ್ಷಗಳ ಕಠಿಣ ಶಿಕ್ಷೆ...

ಉಡುಪಿ; ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ; ಅಪ್ಪ ಮಗನಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್ ಆದೇಶ

- Advertisement -
- Advertisement -

ಉಡುಪಿ; ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ ಮಗನಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್ ಆದೇಶ ನೀಡಿದೆ. ದಾವಣಗೆರೆ ಮೂಲದ ಶಿವಶಂಕರ್(58) ಹಾಗೂ ಆತನ ಮಗ ಸಚಿನ್ (28) ಶಿಕ್ಷೆಗೆ ಒಳಗಾದವರು.

14 ವರ್ಷದ ಬಾಲಕಿ ತನ್ನ ತಾಯಿ ಜೊತೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಅದೇ ಮನೆಯಲ್ಲಿ ತಾಯಿಯ ಸ್ನೇಹಿತ ಶಿವಶಂಕರ್ ಕೂಡ ವಾಸವಾಗಿದ್ದನು. ಲಾಕ್ ಡೌನ್ ಸಮಯದಲ್ಲಿ 2020ರ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಬೆಳಗಿನ ಜಾವ 5ಗಂಟೆಗೆ ನೊಂದ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಶಿವಶಂಕರ್ ನೊಂದ ಬಾಲಕಿಯ ಮೇಲೆ ಶಿವಶಂಕರ್ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ.

ಇನ್ನು ಮಣಿಪಾಲದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್ ಮಗ ಸಚಿನ್, ಕೆಲವೊಮ್ಮೆ ಮನೆಗೆ ಬಂದು ಹೋಗುತ್ತಿದ್ದನು. ಆತನು ಕೂಡ ಮನೆಯಲ್ಲಿ ನೊಂದ ಬಾಲಕಿ ಒಬ್ಬಳೇ ಇರುವಾಗ ಮೇ ತಿಂಗಳಲ್ಲಿ ಬಲತ್ಕಾರ ಮಾಡಿ ಅತ್ಯಾಚಾರ ಎಸಗಿದ್ದನು. ಈ ವಿಚಾರವನ್ನು ನೊಂದ ಬಾಲಕಿ ನೆರೆಮನೆಯವರಲ್ಲಿ ಹೇಳಿಕೊಂಡಿದ್ದಳು. ಈ ಬಗ್ಗೆ ನೆರೆಮನೆ ಮಹಿಳೆ ಮಕ್ಕಳ ಸಹಾಯ ವಾಣಿಗೆ ದೂರು ನೀಡಿದ್ದರು.ಅದರಂತೆ ಆಗಿನ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ನೊಂದ ಬಾಲಕಿಯನ್ನು ರಕ್ಷಿಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಆಗಿನ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಂತ್ ಎಂ. ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ದೋಷಾರೋಪಣೆಯಲ್ಲಿ 22 ಸಾಕ್ಷಿಗಳನ್ನು ನಮೂದಿಸಲಾಗಿದ್ದು, ಒಟ್ಟು 15 ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯದಲ್ಲಿ ನಡೆಸಲಾಯಿತು. ನೊಂದ ಬಾಲಕಿಯ ತಾಯಿ ಅಭಿಯೋಜನೆ ವಿರುದ್ಧ ಸಾಕ್ಷಿ ನುಡಿದಿದ್ದರೂ ಕೂಡ ನೊಂದ ಬಾಲಕಿಯ ಸಾಕ್ಷಿ ಮತ್ತು ಇತರ ಸಾಂದರ್ಭಿಕ ಸಾಕ್ಷ್ಯವನ್ನು ಪರಿಗಣಿಸಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಪ್ರಕರಣದಡಿ ಇಬ್ಬರು ಆರೋಪಿಗಳಿಗೆ ತಲಾ 10 ವರ್ಷ ಜೈಲುಶಿಕ್ಷೆ, 10000ರೂ. ದಂಡ, ಪೋಕ್ಸೊ ಕಲಂನಡಿ ತಲಾ 20ವರ್ಷ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷಗಳ ಹೆಚುವರಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

ಒಟ್ಟು ದಂಡದಲ್ಲಿ 40ಸಾವಿರ ರೂ.ನಲ್ಲಿ 30ಸಾವಿರ ರೂ. ನೊಂದ ಬಾಲಕಿಗೆ ಪರಿಹಾರವಾಗಿ ಮತ್ತು 10ಸಾವಿರ ರೂ. ಸರಕಾರಕ್ಕೆ ಪಾವತಿಸುವಂತೆ ಹಾಗೂ ಹೆಚ್ಚುವರಿ ಪರಿಹಾರವಾಗಿ ನೊಂದ ಬಾಲಕಿಗೆ 3ಲಕ್ಷ ರೂ. ಸರಕಾರ ದಿಂದ ನೀಡುವಂತೆ ಆದೇಶಿಸಲಾಗಿದೆ. ಸದರಿ ಮೊತ್ತವನ್ನು ನೊಂದ ಬಾಲಕಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಉಡುಪಿ ಪೊಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

- Advertisement -

Latest News

error: Content is protected !!