ಕುಂದಾಪುರ: ಅಕ್ಟೋಬರ್ 19 ರಂದು ತಾಲ್ಲೂಕಿನ ಅಂಪಾರುದಲ್ಲಿ ಬೆಳಕಿಗೆ ಬಂದ ಆತ್ಮಹತ್ಯೆ ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಪ್ರಕರಣವನ್ನು ಈಗ ಕೊಲೆ ಎಂದು ದಾಖಲಿಸಲಾಗಿದ್ದು, ಆತ್ಮಹತ್ಯೆಗೈದ ಪತ್ನಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಾಗಿರುವ ಕಾರಣ ಇವರನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.
ಅಂಪಾರಿನ ವಿವೇಕನಗರದ ನಾಗರಾಜ(36) ಅ.19 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಪತ್ನಿ ಮಮತಾ ತನ್ನ ಗಂಡ ವಿಪರೀತ ಕುಡಿತದ ಚಟ ಹೊಂದಿದ್ದು ಅದೇ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿದ್ದರು ಎಂದು ದೂರು ನೀಡಿದ್ದಳು. ಇದೀಗ ಮಮತಾ ಮತ್ತು ಆಕೆಯ ಸ್ನೇಹಿತರಾದ ಕುಮಾರ್ ಮತ್ತು ದಿನಕರ್ ಅವರನ್ನು ಪೊಲೀಸರು ಬಂಧಿಸಿದ್ದು ಕೊಲೆ ನಡೆಸಿರುವುದನ್ನು ಪತ್ತೆ ಮಾಡಿದ್ದಾರೆ.
ಈ ಹಿಂದೆ ತನ್ನ ಪತಿ ಅಕ್ಟೋಬರ್ 18 ರಂದು ಸಂಜೆ 6.30 ರಿಂದ ಅಕ್ಟೋಬರ್ 19 ರ ಬೆಳಿಗ್ಗೆ 6 ಗಂಟೆಯೊಳಗೆ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಮಮತಾ ಈ ಹಿಂದೆ ದೂರು ದಾಖಲಿಸಿದ್ದರು.ವಿಪರೀತ ಮದ್ಯ ವ್ಯಸನಿಯಾಗಿದ್ದ ನಾಗರಾಜ್ ತನ್ನ ಜೀವನದ ಬಗ್ಗೆ ಜಿಗುಪ್ಸೆಗೊಂಡಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಮೃತರ ಸಹೋದರಿ ಶಿವಮೊಗ್ಗದ ಸಾಗರ ತಾಲೂಕಿನ ಮಾಲ್ವೆಯ ನಿವಾಸಿ ನಾಗರತ್ನ ಮತ್ತು ಇತರ ಕೆಲವು ಸಂಬಂಧಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಶಂಕರನಾರಾಯಣ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹದಲ್ಲಿ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳನ್ನು ಹೊಂದಿರುವುದನ್ನು ಕುಟುಂಬ ಸದಸ್ಯರು ಗಮನಿಸಿದ್ದು ಕೊಲೆ ಎಂದು ಶಂಕಿಸಿ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದರು.
ನಾಗರಾಜ್ ಕೆಲ ದಿನಗಳ ಹಿಂದೆ ತನ್ನ ಪತ್ನಿ ಮತ್ತು ಇತರರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸಹೋದರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದರು. ಇದೀಗ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ನಾಗರಾಜ್ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಮಮತಾಳನ್ನು ಪ್ರೀತಿಸಿದ ನಂತರ ಆತ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ನಾಗರಾಜ್ ನಿತ್ಯ ಕುಡುಕನಾಗಿದ್ದು, ಆತನ ಮನೆಯಲ್ಲಿ ದಿನವೂ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಅಕ್ರಮ ಸಂಬಂಧದಿಂದಾಗಿ ಕೊಲೆ ನಡೆದಿದೆ ಎಂದು ಕೆಲವು ಸ್ಥಳೀಯ ಮೂಲಗಳು ಹೇಳಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.