ನವದೆಹಲಿ : ದೇಶಾದ್ಯಂತ ಮಾರಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇನ್ನು 19 ದಿನಗಳ ಕಾಲ ಅಂದರೆ ಮೇ.3ರವರೆಗೆ ಲಾಕ್ ಡೌನ್ ನನ್ನು ವಿಸ್ತರಣೆ ಮಾಡಿದ್ದಾರೆ. ಅಲ್ಲದೇ, ಜನತೆಯ ಹಿತದೃಷ್ಟಿಯಿಂದ ಕೆಲವೊಂದು ಸೂತ್ರಗಳನ್ನು ಪ್ರಧಾನಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಮೇ.3ರವರೆಗೆ ಎಲ್ಲ ಪ್ರಯಾಣಿಕ ರೈಲುಗಳ ಸೇವೆಯನ್ನು ರದ್ದುಗೊಳಿಸಿರುವುದಾಗಿ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಮೇ.3ರವರೆಗೆ ಲಾಕ್ ಡೌನ್ ವಿಸ್ತರಿಸಿರುವ ಹಿನ್ನಲೆಯಲ್ಲಿ ಅಲ್ಲಿಯವರೆಗೆ ಎಲ್ಲ ಪ್ರೀಮಿಯಂ ರೈಲು, ಮೇಲ್, ಎಕ್ಸ್ ಪ್ರೆಸ್ ರೈಲು, ಪ್ಯಾಸೆಂಜರ್ ರೈಲು, ಸಬ್ ಅರ್ಬನ್ ರೈಲು, ಕೊಲ್ಕತ್ತಾ ಮೆಟ್ರೋ ರೈಲು ಕೊಂಕಣ ರೈಲು ಸೇರಿದಂತೆ ಎಲ್ಲ ಪ್ರಯಾಣಿಕ ರೈಲು ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ಪ್ರಧಾನಿ ಮೋದಿ ಏ.20ರವರೆಗೆ ಲಾಕ್ ಡೌನ್ ಕುರಿತಂತೆ ಪರಿಸ್ಥಿತಿ ಚೇತರಿಕೆ ಹಾಗೂ ಮೌಲ್ಯಂಕನ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಹಾಟ್ ಸ್ಪಾಟ್ ಗಳಿಗೆ ಇದು ಅನ್ವಯವಾಗುವುದಿಲ್ಲ. ಹೀಗಾಗಿ ರೈಲ್ವೆ ಇಲಾಖೆ ಮುಂಜಾಗ್ರತೆಯಾಗಿ ಮೇ.3ರವರೆಗೆ ಎಲ್ಲ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ