ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಜಾರಿಕೊಳ್ಳುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ಬಾಕಿ ಇರುವ ಇ-ಚಲನ್ ದಂಡದ ಮೊತ್ತವನ್ನು ವಸೂಲಿ ಮಾಡಲು ವಿದ್ಯುತ್ ಬಿಲ್ ಜೊತೆಗೆ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಕುರಿತು ವಿಚಾರಣೆ ನಡೆಸಿದ್ದು, “ಕೇವಲ ಚಲನ್ ನೀಡುವುದು ಸಾಲದು. ನಿಗದಿತ ಅವಧಿಯಲ್ಲಿ ಸಂಚಾರ ದಂಡ ಪಾವತಿಸದಿದ್ದರೆ ಅದನ್ನು ವಿದ್ಯುತ್ ಬಿಲ್‌ಗೆ ಸೇರಿಸಬೇಕು. ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುವ ಅಥವಾ ವಾಹನಗಳನ್ನು ಜಪ್ತಿ ಮಾಡುವಂತಹ ಕಠಿಣ ಕ್ರಮಗಳ ಬಗ್ಗೆ ಪ್ರಾಧಿಕಾರಗಳು ಯೋಚಿಸಬೇಕು” ಎಂದು ಅಭಿಪ್ರಾಯಪಟ್ಟಿದೆ.
ದೇಶಾದ್ಯಂತ ಪ್ರಸ್ತುತ ಸುಮಾರು ₹45,000 ಕೋಟಿ ಮೌಲ್ಯದ ಇ-ಚಲನ್ ದಂಡ ಬಾಕಿ ಉಳಿದಿದ್ದು, ಈ ಪೈಕಿ ಕೇವಲ ₹25,000 ಕೋಟಿ ಮಾತ್ರ ವಸೂಲಿಯಾಗಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ದಂಡ ವಸೂಲಿಗೆ ಪರಿಣಾಮಕಾರಿ ಮಾರ್ಗ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಸರ್ಕಾರಗಳಿಗೆ ನಿರ್ದೇಶಿಸಿದೆ.


