ಬೆಂಗಳೂರು: ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ಮಕ್ಕಳ ಸಮಸ್ತ್ರದ ಬಣ್ಣ ಬದಲಾಗಲಿದೆ. ಯಾವ ಬಗೆಯ ಸಮವಸ್ತ್ರ ನೀಡಬೇಕು ಎಂಬುದನ್ನು ತೀರ್ಮಾನಿಸುವ ಹೊಣೆಯನ್ನು ಎಸ್‌ಡಿಎಂಸಿ ಸದಸ್ಯರಿಗೆ ನೀಡಲಾಗಿದೆ.
ಕೋವಿಡ್ ಕಾರಣಕ್ಕೆ 2ನೇ ಸೆಟ್ ಸಮವಸ್ತ್ರ ಖರೀದಿ ಮಾಡಲು ಹಣ ಬಿಡುಗಡೆ ಮಾಡಲು 2019-20ನೇ ಸಾಲಿನಲ್ಲಿ ವಿಳಂಬವಾಗಿದೆ. ಆದ್ದರಿಂದ, ಈ ಶೈಕ್ಷಣಿಕ ವರ್ಷದಲ್ಲಿ ಎಸ್‌ಡಿಎಂಸಿ ಯಾವ ಬಣ್ಣದ ಸಮವಸ್ತ್ರ ನೀಡಬೇಕು ಎಂದು ತೀರ್ಮಾನ ಮಾಡಲಿದೆ.
ಶಾಲೆಗಳು ಆರಂಭವಾಗುತ್ತಿದ್ದಂತೆ ಸಮಸ್ತ್ರಗಳನ್ನು ಖರೀದಿ ಮಾಡಿ ಮಕ್ಕಳಿಗೆ ವಿತರಣೆ ಮಾಡಲು ಎಸ್‌ಡಿಎಂಸಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಈ ನಿಯಮ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರದ ಈ ತೀರ್ಮಾನದಿಂದಾಗಿ ರಾಜ್ಯದ ಪ್ರತಿ ಶಾಲೆಯ ಮಕ್ಕಳ ಸಮವಸ್ತ್ರ ಈ ಬಾರಿ ಬಣ್ಣ ಬಣ್ಣವಾಗಿರಲಿದೆ. ಇಷ್ಟು ವರ್ಷ ಎಲ್ಲಾ ಸರ್ಕಾರಿ ಶಾಲೆಗಳ ಸಮವಸ್ತ್ರ ಏಕರೂಪದ್ದಾಗಿತ್ತು. ಶಾಲೆಗಳು ಯಾವಾಗ ಆರಂಭವಾಗಲಿದೆ? ಎಂಬುದನ್ನು ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ.
ಈ ಬಾರಿ ಶಾಲೆಗಳು ಯಾವಾಗ ಬಾಗಿಲು ತೆರೆಯಲಿವೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದ್ದರಿಂದ, ಒಂದೇ ಸೆಟ್ ಸಮವಸ್ತ್ರ ವಿತರಣೆ ಮಾಡಲು ಚಿಂತನೆ ನಡೆದಿದೆ. ಎಸ್‌ಡಿಎಂಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಇಷ್ಟು ದಿನ ಎಸ್‌ಡಿಎಂಸಿ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡುವ ಹಕ್ಕು ನೀಡಲಾಗಿತ್ತು. ಈ ಬಾರಿ ಬಣ್ಣವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸಮವಸ್ತ್ರದ ಬಣ್ಣ ಎಲ್ಲಾ ಶಾಲೆಗಳಲ್ಲಿ ಏಕರೂಪವಾಗಲಿದೆ.
ಕರ್ನಾಟಕ ಸರ್ಕಾರ ಪ್ರತಿ ವಿದ್ಯಾರ್ಥಿಯ ಸಮವಸ್ತ್ರಕ್ಕೆ 250 ರೂ. ಖರ್ಚು ಮಾಡುತ್ತದೆ. ವಾರ್ಷಿಕ ಸುಮಾರು 100 ಕೋಟಿ ರೂ.ಗಳನ್ನು ಇದಕ್ಕಾಗಿಯೇ ಖರ್ಚು ಮಾಡಲಾಗುತ್ತಿತ್ತು.