ಬ್ರಹ್ಮಾವರ: ಕ್ಷುಲ್ಲಕ್ಕ ಕಾರಣಕ್ಕಾಗಿ ತಂದೆಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣ ಪೆಜಮಂಗೂರಿನ ಮೊಗವೀರಪೇಟೆಯಲ್ಲಿ ನಡೆದಿದೆ.
ಆರೋಪಿ ಮಗನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಆನಂದ ಮರಕಾಲ(50)ಬಂಧಿತ ಆರೋಪಿ. ಸಾಧು ಮರಕಾಲ(68) ಹತ್ಯೆಯಾದವರು.
ಘಟನೆಯು ಅ.7ರಂದು ನಡೆದಿದ್ದು, ಮಧ್ಯಾಹ್ನ ಮನೆಯಲ್ಲಿ ಮಗ ತಂದೆಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದನು. ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಆರೋಪಿಯನ್ನು ಉಪ್ಪರು ಎಂಬಲ್ಲಿ ಬಂಧಿಸಲಾಗಿದೆ.
ಮನೆಗೆ ಬಂದು ತಂದೆ ಜೊತೆ ಪ್ರತಿಬಾರಿ ಗಲಾಟೆ ಮಾಡುತ್ತಿದ್ದ ಆನಂದ, ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂಬ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಉದ್ದೇಶದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


