
ಉಳ್ಳಾಲ: ‘ಜೂನಿಯರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಎಂದೇ ಜಿಲ್ಲೆಯಾದ್ಯಂತ ಪ್ರಸಿದ್ದಿಯನ್ನು ಪಡೆದಿದ್ದ ಕರಾವಳಿಯ ಜನಪ್ರಿಯ ಹಿರಿಯ ಬಹುಭಾಷಾ ಗಾಯಕರಾಗಿದ್ದ ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ನಿವಾಸಿ ಚಂದ್ರಹಾಸ್ ಸುವರ್ಣ (64) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ರವಿವಾರ ರಾತ್ರಿ ನಿಧನರಾದರು.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅವರು, ಕಳೆದ ನಾಲ್ಕು ದಶಕಗಳಿಂದ ವಿವಿಧ ಆರ್ಕೆಸ್ಟ್ರಾ ತಂಡಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೂರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ಕೊಂಕಣಿ ಭಾಷಾ ಗಾಯನದಲ್ಲೂ ಉತ್ತಮ ಹಿಡಿತ ಸಾಧಿಸಿದ್ದ ಚಂದ್ರಹಾಸ್ ಅವರು, ಪ್ರಸಿದ್ಧ ‘ಮಾಂಡ್ ಸೋಭಾಣ್’ ಸಂಸ್ಥೆ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕರಾವಳಿ ರಂಗಭೂಮಿಯ ದಿಗ್ಗಜ ನಿರ್ದೇಶಕರುಗಳಾದ ಕೆ.ಎನ್.ಟೈಲರ್ ಹಾಗೂ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ನಾಟಕಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಲ್ಲದೆ, ಹಲವಾರು ಜನಪ್ರಿಯ ಆಲ್ಬಮ್ ಗೀತೆಗಳಿಗೂ ಧ್ವನಿಯಾಗಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.


