Sunday, May 5, 2024
Homeಕರಾವಳಿಉಡುಪಿಉಡುಪಿ: ಕಳೆದುಹೋದ ಚಿನ್ನದ ಸರ ದೈವ ಸಾನಿಧ್ಯದಲ್ಲಿ ಪತ್ತೆ: ಇದುವೇ ಶ್ರೀ ಧರ್ಮ ಜಾರಂದಾಯ ಪವಾಡ

ಉಡುಪಿ: ಕಳೆದುಹೋದ ಚಿನ್ನದ ಸರ ದೈವ ಸಾನಿಧ್ಯದಲ್ಲಿ ಪತ್ತೆ: ಇದುವೇ ಶ್ರೀ ಧರ್ಮ ಜಾರಂದಾಯ ಪವಾಡ

spot_img
- Advertisement -
- Advertisement -

ಉಡುಪಿ: ಕರ್ನಾಟಕ ಕರಾವಳಿಯ ತುಳುನಾಡಿನಲ್ಲಿ ದೈವಗಳೆಂದರೆ ಅಪಾರ ನಂಬಿಕೆ. ದೈವದ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಆಗಿಂದಾಗ್ಗೆ ಕೆಲವೊಂದು ಪವಾಡಗಳು ನಡೆಯುತ್ತಲೇ ಇರುತ್ತವೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಪಣಿಯೂರು ಸಮೀಪ ದೈವ ಪವಾಡ ಮತ್ತೊಮ್ಮೆ ಸಾಬೀತಾಗಿದೆ. ಮಗುವಿನ ಕಳೆದುಹೋದ ಚಿನ್ನದ ಸರವೊಂದು ಕುಟುಂಬದ ದೈವ ಸಾನಿಧ್ಯದಲ್ಲಿ ಪತ್ತೆಯಾಗಿದೆ. ದೈವದ ಮುಂದೆ ಪ್ರಾರ್ಥಿಸಿದ ಮೂರೇ ದಿನಗಳಲ್ಲಿ ಉರಿಯುವ ಕಾಲುದೀಪದ ಕೆಳಗೆ ಸರ ಕಂಡುಬಂದಿದೆ.

ಹೌದು ಮೇ 18 ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಸರ ಕಳ್ಳತನವಾಗಿತ್ತು. ನಾಂಜಾರು ದೈವ ಸ್ಥಾನಕ್ಕೆ ಒಳಪಟ್ಟ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಕಣ್ಮರೆಯಾಗಿತ್ತು. ಪಡುಬಿದ್ರಿಯ ಮದುವೆ ಸಮಾರಂಭದಲ್ಲಿ ತಂದೆ-ತಾಯಿ ಅಜ್ಜಿಯ ಜೊತೆಗೆ ಇದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನದ ಬಳಿಕ ಕಾಣಸಿಗಲಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.

ಬಳಿಕ ಚಿನ್ನದ ಸರ ಕಣ್ಮರೆಯಾಗಿರುವ ಬಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳಿಗೆ ಕೈ ಮುಗಿದು, ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೊರಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದ್ದರು. ಮೇ 24ರಂದು ಹೂವಿನ ಪೂಜೆ ಕೊಟ್ಟು ಪ್ರಾರ್ಥನೆ ಸಲ್ಲಿಸಲಾಗಿತ್ತು.

ಚಿನ್ನದ ಸರ ಕಾಣೆಯಾದ 10ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿರುವ ಸಾಣಾದಿಗೆಯಲ್ಲಿ ದೀಪ ಹಾಕಲೆಂದು ಬಂದಿದ್ದ ಸಾನದ ಮನೆಯವರಿಗೆ ಸಾಣಾದಿಗೆಯ ಜೊತೆಗೆ ಚಿನ್ನದ ಸರ ಇರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಸಲ್ಲಿಸಿದ ಮೂರು ದಿನಗಳಲ್ಲಿ ಚಿನ್ನದ ಸರ ಪತ್ತೆಯಾಗಿದೆ.

ಸರ ಕಳೆದುಕೊಂಡಿದ್ದ ಮನೆಯವರು ಬಂದು ಪರಿಶೀಲಿಸಿದಾಗ ಅದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವಾಗಿದ್ದು, ಕೂಡಲೇ ಮಗುವಿನ ತಾಯಿಗೆ ವಿಷಯ ಮುಟ್ಟಿಸಿದರು. ತಾಯಿ ಕೂಡಾ ಸರ ತನ್ನದೇ ಮಗುವಿನದ್ದೆಂದು ಧೃಡಪಡಿಸಿದ್ದಾರೆ. ಗುರುವಾರ ರಾತ್ರಿ ದೈವಸ್ಥಾನದ ಜಗಲಿಯಲ್ಲಿ ಕುಳಿತು ಮನೆಯವರು ಮಾತನಾಡುತ್ತಾ ಬಹಳ ಹೊತ್ತು ಕಳೆದಿದ್ದರು.  ಈ ವೇಳೆಯೂ ದೀಪ ಉರಿಯುತ್ತಲೇ ಇತ್ತು. ಆದರೂ ಯಾವುದೇ ಚಿನ್ನದ ಸರ ಕಂಡು ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಸಾಣಾದಿಗೆಗೆ ಎಣ್ಣೆ ಹಾಕಿ, ದೀಪ ಬೆಳಗಿಸುವ ವೇಳೆ ಚಿನ್ನದ ಸರ ಕಂಡು ಬಂದಿದ್ದು ಕೂಡಲೇ ಮನೆಯವರನ್ನು ಕರೆದು ತೋರಿಸಿದಾಗ ಅದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವೆಂದು ಗುರುತಿಸಲ್ಪಟ್ಟಿದೆ. ಧರ್ಮ ಜಾರಂದಾಯನ ಕೃಪೆಯಿಂದಲೇ ಕಳೆದು ಹೋಗಿದ್ದ ಚಿನ್ನದ ಸರ ಮರಳಿ ದೊರಕಿದೆ ಎಂದು ಮನೆಯವರು ಭಾವುಕರಾಗಿದ್ದಾರೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಜಾವದ ನಡುವೆ ಈ ಬೆಳವಣಿಗೆ ನಡೆದಿದೆ. ಧರ್ಮ ಜಾರಂದಾಯ ದೈವದ ಕಾರಣಿಕ ಇದಾಗಿದೆ ಎಂದು ನಾಂಜಾರು ಸಾನದ ಮನೆ ಕಿಶೋರ್ ಪೂಜಾರಿ ಹಾಗೂ ರಾಕೇಶ ಕುಂಜೂರ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!