ಕಡಬ: ಎರಡು ತಿಂಗಳ ಹಿಂದೆ ಆರಂಭವಾದ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರನಾಗಿ ಸೇರಿಕೊಂಡ ವ್ಯಕ್ತಿಯೋರ್ವ ಪಾಲುದಾರಿಕೆಯ ಹೆಸರಿನಲ್ಲಿ ಸ್ಥಳೀಯ ಜನರೊಂದಿಗೆ ಸ್ನೇಹ ಸಂಪಾದಿಸಿ ನಂತರ ಲಕ್ಷಾಂತರ ರೂ. ಹಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ.
ಮೈಸೂರು ಪಿರಿಯಾಪಟ್ಟಣ ತಾಲೂಕಿನ ನಿವಾಸಿಯಾಗಿರುವ ಈತ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ.ಟಿ. ಕರೀಗೌಡ ಎಂಬವರ ಪುತ್ರ ಶರತ್ ಬಾಬು ಸಿ.ಕೆ. ಎಂದು ಗುರುತಿಸಲಾಗಿದೆ.
ಈತ ಕಡಬದಲ್ಲಿ ನೂತನವಾಗಿ ಆರಂಭವಾದ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸ್ಥಳೀಯವಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಅತ್ಯಲ್ಪ ಸಮಯದಲ್ಲಿ ಹೋಟೆಲ್ ಸುತ್ತಮುತ್ತಲಿನ ಪರಿಸರದ ಹಲವರಲ್ಲಿ ಸ್ನೇಹ ಸಂಪಾದಿಸಿಕೊಂಡಿದ್ದ.ಈ ನಡುವೆ ಸ್ಥಳೀಯವಾಗಿ ಉನ್ನತ ಸ್ಥಾನದಲ್ಲಿ ಇರುವ ಹಲವಾರು ಜನರನ್ನು ತನ್ನ ಮಾತಿನ ಮೋಡಿ ಮೂಲಕ ವಂಚಿಸಿ ಹಣ, ಚಿನ್ನಾಭರಣಗಳು, ವಾಹನ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹತ್ತು ಲಕ್ಷಕ್ಕೂ ಮಿಕ್ಕಿದ ವಸ್ತುಗಳೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ತಾನು ಕಡಬದಲ್ಲಿ ಪಾಸ್ಟ್ ಫುಡ್ ವ್ಯಾಪಾರ ಮಾಡುವ ಉದ್ದೇಶವನ್ನು ಹೇಳಿಕೊಂಡಿದ್ದು ಈ ಬಗ್ಗೆ ತಯಾರಿಯೂ ನಡೆಸಿಕೊಂಡಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಈತನ ವಿರುದ್ಧ ಹಣ ಕಳೆದುಕೊಂಡವರು ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಈತ ಪ್ರಸ್ತುತ ವಾಸವಿದ್ದ ಬಾಡಿಗೆ ರೂಂಗೆ ಬೀಗ ಹಾಕಲಾಗಿದೆ. ಈತನ ಬಗ್ಗೆ ಮಾಹಿತಿ ಪಡೆಯಲು ಕಡಬದಲ್ಲಿ ವಂಚನೆಗೊಳಗಾದ ಕೆಲವರು ಮೈಸೂರಿನ ಆತನ ವಿಳಾಸದ ಮನೆಗೆ ಭೇಟಿ ನೀಡಿದ್ದು, ಈತನು ತನ್ನ ಕುಟುಂಬದೊಂದಿಗೆ ಕಳೆದ 10 ವರ್ಷಗಳಿಂದ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ. ಕಡಬದಲ್ಲಿ ಎಷ್ಟು ಜನರಿಗೆ ಈತ ವಂಚನೆ ಮಾಡಿದ್ದಾನೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.


