ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂರನೇ ಕಂತಿನ ಹಣ ಅಕ್ಟೋಬರ್ 5ಕ್ಕೆ ಬರಲಿದೆ.
ವರ್ಷಕ್ಕೆ ಮೂರು ಬಾರಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ನೀಡಲಾಗುತ್ತದೆ. ಈವರೆಗೆ 17 ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರಸ್ತುತ ತಿಂಗಳ ಹಣವು ಅ. 5ಕ್ಕೆ 18ನೇ ಕಂತಿನ ಹಣ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಎಲ್ಲಾ ನೊಂದಾಯಿತ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ಪ್ರತೀ ಕಂತಿನಲ್ಲೂ ರೈತರಿಗೆ 2,000 ರೂ ನೀಡಲಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಯಾರು ಅರ್ಹರಾಗುತ್ತಾರೆ: ಯಾವ ರೈತರು ಎರಡು ಹೆಕ್ಟೇರ್ ಅಥವಾ ಐದು ಎಕರೆಯೊಳಗಿನ ಜಮೀನು ಹೊಂದಿರುತ್ತಾರೋ ಅವರು ಈ ಸ್ಕೀಮ್ಗೆ ಅರ್ಹರಾಗಿರುತ್ತಾರೆ. ಸಣ್ಣ ರೈತರಿಗೆ ವ್ಯವಸಾಯಕ್ಕೆ ಸಹಾಯಾಗಲೆಂದು ಸರ್ಕಾರ ಈ ಸ್ಕೀಮ್ ಆರಂಭಿಸಿದ್ದು, ಸರ್ಕಾರಿ ಸೇವೆಯಲ್ಲಿರುವವರು, ವೈದ್ಯ, ವಕೀಲ ಇತ್ಯಾದಿ ವೃತ್ತಿಪರ ಕೆಲಸದವರು, ಶಾಸಕರು, ಸಂಸದರು ಇತ್ಯಾದಿ ಜನಪ್ರತಿನಿಧಿಗಳು, ತೆರಿಗೆ ಪಾವತಿಸುತ್ತಿರುವವರು ಹಾಗೂ ಅವರು ಇರುವ ಕುಟುಂಬದವರು ಪಿಎಂ ಕಿಸಾನ್ ಯೋಜನೆ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಇಲ್ಲಿಯವರೆಗೆ ಸುಮಾರು 10 ಕೋಟಿ ರೈತರು ಸ್ಕೀಮ್ಗೆ ನೊಂದಾಯಿಸಿಕೊಂಡಿದ್ದಾರೆ.
ನೋಂದಾಯಿಸುವ ಬಗ್ಗೆ: ಆಫ್ಲೈನ್ ಮತ್ತು ಆನ್ಲೈನ್ ಎರಡೂ ಮಾರ್ಗಗಳಲ್ಲಿಯೂ ಯೋಜನೆಗೆ ನೊಂದಾಯಿಸಲು ಅವಕಾಶವಿದೆ. ಗ್ರಾಮದ ಸಮೀಪವಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿ ಖುದ್ದಾಗಿ ನೊಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ್, ವೋಟರ್ ಐಡಿ, ಪಹಣಿ ಸರ್ಟಿಫಿಕೇಟ್, ಬ್ಯಾಂಕ್ ಖಾತೆ ಪ್ರತಿ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.
ಆನ್ಲೈನ್ನಲ್ಲಿ ಮಾಡಬೇಕೆಂದರೆ pmkisan.gov.in/ ಪಿಎಂ ಕಿಸಾನ್ ಸ್ಕೀಮ್ನ ವೆಬ್ಸೈಟ್ಗೆ ಹೋಗಬೇಕು. ಅಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕಾಣಬಹುದು. ಅಲ್ಲಿ ಕ್ರಮಾವಳಿಗಳನ್ನು ಅನುಸರಿಸಿ ಯೋಜನೆಗೆ ನೊಂದಾಯಿಸಿಕೊಳ್ಳಲು ಸಾಧ್ಯವಿದೆ. ನೀವೀಗಾಗಲೇ ನೊಂದಾಯಿಸಿದ್ದರೆ ಫಲಾನುಭವಿ ಪಟ್ಟಿ ಪರಿಶೀಲಿಸಿ.
ನೀವು ಈಗಾಗಲೇ ಸ್ಕೀಮ್ಗೆ ನೊಂದಾಯಿಸಿದ್ದು ಇನ್ನೂ ಕೂಡ ಕಂತಿನ ಹಣ ಬಂದಿಲ್ಲವೆಂದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅದನ್ನು ಆನ್ಲೈನ್ನಲ್ಲೇ ಮಾಡಬಹುದು.
ಮೇಲೆ ತಿಳಿಸಿದಂತಹ ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಅಲ್ಲಿ ಫಾರ್ಮರ್ಸ್ ಕಾರ್ನರ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ದುಕೊಂಡು ಸರ್ಚ್ ಕೊಡಿ. ಆ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು.