ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳಕ್ಕೆ ಮುಸ್ಲಿಂ ಚಿಂತಕ ತನ್ವೀರ್ ಅಹಮ್ಮದ್ ಉಲ್ಲಾ ನೇತ್ರತ್ವದ ತಂಡ ಆಗಮಿಸಿದೆ.
ಪಾದಯಾತ್ರಿಗಳಿಗೆ ದೇವಸ್ಥಾನದ ವತಿಯಿಂದ ಅದ್ದೂರಿ ಸ್ವಾಗತ ಸಿಕ್ಕಿದ್ದು, ಹಾರ ಹಾಕಿ ಬ್ಯಾಂಡ್, ವಾಲಗದ ಮೂಲಕ ಸ್ವಾಗತಿಸಲಾಗಿದೆ. ಹತ್ತು ದಿನಗಳ ಹಿಂದೆ ಬೆಂಗಳೂರಿನಿಂದ ಹೊರಟಿದ್ದ ತನ್ವೀರ್ ಅಹಮ್ಮದ್ ಉಲ್ಲಾ ನೇತ್ರತ್ವದ ತಂಡ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದೆ.
ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಮಾತನಾಡಿದ ತನ್ವೀರ್ ಅಹಮ್ಮದ್ ಉಲ್ಲಾ, “ನಮ್ಮ ಪಾದಯಾತ್ರೆ ಉದ್ದೇಶ ಒಂದೆ, ಪೂಜ್ಯ ಖಾವಂದರು ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳದ ಒಳ್ಳೆ ಕೆಲಸ ಕಣ್ಣಾರೆ ನೋಡಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೀತಿ ಪ್ರೇಮದ ದೇಗುಲವಾಗಿದ್ದು, ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರಿಗೆ ಏನು ಏನು ಕೊಡುಗೆ ನೀಡಿದ್ದಾರೆ ಅದನ್ನ ಕಣ್ಣಾರೆ ನೋಡಬೇಕು ಎಂದಿತ್ತು. ಇಲ್ಲಿಗೆ ಬಂದು ನಮ್ಮ ಅಪೇಕ್ಷೆ ಮೀರಿ ಖುಷಿಯಾಗಿದೆ. ಆರೋಪ ಯಾರ ಮೇಲೆ ಯಾರು ಬೇಕಾದರೂ ಮಾಡಬಹುದು. ಆರೋಪ ಶುದ್ಧವಾಗಿದ್ದರೆ ಮಾತ್ರ ಶುದ್ಧವಾದ ಪ್ರತಿಫಲ ಸಿಗುತ್ತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಅಗೆದರೆ ಬುರುಡೆ ಗಿರುಡೆ ಸಿಗಲ್ಲ. ಇವರು ಕೊಟ್ಟಿರುವ ಕೊಡುಗೆ, ಮಕ್ಕಳ ಶಿಕ್ಷಣ, ಅನುದಾನ, ಆಸ್ಪತ್ರೆಯಲ್ಲಿ ಮಾಡುತ್ತಿರುವ ಕೆಲಸಗಳು ಸಿಗುತ್ತವೆ. ಧರ್ಮವನ್ನ ಎತ್ತಿ ಹಿಡಿಯಲು ಮಾಡಿರುವ ಪ್ರಯತ್ನ ಮತ್ತು ಪ್ರೀತಿ ಪ್ರೇಮ ಭಾವೈಕ್ಯತೆಯ ಭಾರತ ಸಿಗುತ್ತೆ. ಇನ್ನು ಕೇಸನ್ನು ಮೊಟ್ಟ ಮೊದಲ ಬಾರಿ ಆರೋಪ ಬಂದಾಗ ಸಿಬಿಐ ಕೊಡಿ ಎಂದು ಹೇಳಿದವರೇ ಖಾವಂದರು. ಈಗ SIT ಗೆ ಕೊಟ್ಟಿದ್ದಾರೆ ಆದರೆ SIT ಸರಿಯಿಲ್ಲ ಅನ್ನುತ್ತಾರೆ. ಮುಂದೆ ಏನು ಅಮೆರಿಕಾದ FBI ಗೆ ತನಿಖೆಗೆ ಕೊಡಬೇಕಾ?,” ಎಂದರು.
ಇನ್ನು ನಾಲ್ಕೈದು ಕಿಡಿಗೇಡಿಗಳ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ನಮ್ಮ ಡಿಸಿಎಂ ಡಿಕೆ ಶಿವಕುಮಾರ್ ಅಧಿವೇಶನದಲ್ಲಿ ಇದೊಂದು ಷಡ್ಯಂತ್ರ ಎಂದಿದ್ದಾರೆ. ಯಾರು ಸುಮ್ಮನೆ ದೂರು ನೀಡಿದ್ದಾರೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತೆ. ಈಗ ಅವರು ನಾವು ಕೊಟ್ಟಿರುವ ದೂರು ವಾಪಸ್ ತಗೋಳ್ತೀವಿ ಅಂತ್ತಿದ್ದಾರೆ. ಅವರು ಕೊಟ್ಟಿರುವ ದೂರು ಯಾವುದೇ ಕಾರಣಕ್ಕೂ ವಾಪಸ್ ತಗೊಳೋಕೆ ಬಿಡಬಾರದು. ಒಳ್ಳೆ ಕೆಲಸ ಮಾಡೋ ಸಂಸ್ಥೆ ಉಳಿಯಬೇಕು, ನಮ್ಮ ಮಕ್ಕಳು ಬೆಳೆಯಬೇಕು. ನಮ್ಮ ಮಕ್ಕಳು, ರೈತರು ಚೆನ್ನಾಗಿರಬೇಕು ಅಂದ್ರೆ, ಕ್ರಿಮಿನಲ್ ಮೈಂಡ್ ಇದೆ ಅವರನ್ನ ಬಹಿರಂಗವಾಗಿ ಹೊರ ತಂದು ಸಮಾಜದ ಮುಂದೆ ಇಡಬೇಕು. ಮುಂದೆ ಯಾರು ಈ ತರಹ ಷಡ್ಯಂತ್ರ ಮಾಡಿದ್ರೆ ಯಾವ ರೀತಿ ಶಿಕ್ಷೆಯಾಗುತ್ತೆ ಎಂದು ತೋರಿಸಬೇಕು. ನನಗೆ ದೇಶದ ಎಲ್ಲಾ ಸಂಸ್ಥೆಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. SIT ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಶೀಘ್ರ ಅವರ ವರದಿ ಜಾರಿಯಾಗುತ್ತೆ. ನಮ್ಮ ಅಶೋಕ ಸ್ಥಂಭ ದಲ್ಲಿ ನಾಲ್ಕು ಸಿಂಹಗಳಿವೆ. ಆ ಕಾಣಿಸದಿರೋ ನಾಲ್ಕನೇ ಸಿಂಹವೇ ಜನರು. ಮನೆಯಲ್ಲಿ ಕೂತ ಜನರು ಮನೆಯಿಂದ ಹೊರಗಡೆ ಬರಬೇಕು ಬಂದು ಕೇಳಬೇಕು. ಈ ಪ್ರಕರಣ ಜನತಾ ನ್ಯಾಯಾಲಯದಲ್ಲಿದೆ ಜನ ಮಾಡಬೇಕು. ನನಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ. ಡಿಕೆ ಶಿವಕುಮಾರ್ ಸೂಕ್ತ ಶಿಕ್ಷೆ ಕೊಡುತ್ತಾರೆ ಅನ್ನೋ ನಂಬಿಕೆ ಇದೆ,” ಎಂದು ಹೇಳಿಕೆ ನೀಡಿದ್ದಾರೆ.
ಸದ್ಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇಂದು ನಡೆಯಲಿರುವ ಸರ್ವ ಧರ್ಮ ಸಮ್ಮೇಳನದಲ್ಲಿ ತನ್ವೀರ್ ಅಹಮ್ಮದ್ ಉಲ್ಲಾ ಪ್ರಮುಖ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ ಪಾಟೀಲ್, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.


