ಲಾಕ್‌ಡೌನ್ ಜಾರಿಯಾದಾಗಿನಿಂದ ‘ಎಣ್ಣೆ’ಪ್ರಿಯರ ‘ತೀರ್ಥ’ಯಾತ್ರೆಗೆ ಶಾನೇ ಕಷ್ಟವಾಗಿಬಿಟ್ಟಿದೆ ಕಣ್ರೀ! ಹಣ್ಣು-ತರಕಾರಿ-ದಿನಸಿ ಪದಾರ್ಥಗಳಂಥ ದಿನಬಳಕೆಯ ವಸ್ತುಗಳ ರೀತಿಯಲ್ಲೇ ‘ಎಣ್ಣೆ’ಯನ್ನೂ ಪ್ರತಿನಿತ್ಯ ಬಳಸುತ್ತಿದ್ದರೂ ಅದನ್ನು ‘ಅಗತ್ಯದ ವಸ್ತು’ವಿನ ಕೆಟಗರಿಗೆ ಇನ್ನೂ ಸೇರಿಸಿಲ್ಲದ ಕಾರಣ ಅದಕ್ಕಿನ್ನೂ ವಿನಾಯಿತಿ ಸಿಕ್ಕಿಲ್ಲ ಎಂಬುದು ಇಂಥ ‘ತೀರ್ಥ’ರೂಪುಗಳ ಆರೋಪ!
ಆದರೆ, ಇಂಥ ಬಿಕ್ಕಟ್ಟಿನ ಸಂದರ್ಭವನ್ನು ಸ್ವಹಿತಕ್ಕೆ ಬಳಸಿಕೊಳ್ಳಲು ಮುಂದಾದ ತಮಿಳು ಚಿತ್ರನಟರೊಬ್ಬರು ಈಗ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ. ತಮ್ಮ ಸಂಗ್ರಹದಲ್ಲಿದ್ದ ಮದ್ಯವನ್ನು ಅಧಿಕ ಬೆಲೆಗೆ ಮಾರಿ ಗಂಟುಮಾಡಿಕೊಳ್ಳಲು ಹವಣಿಸಿದ್ದ ರಿಜ್ವಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರಂತೆ. ಇವರು ‘ದ್ರೌಪದಿ’ ಎಂಬ ವಿವಾದಾತ್ಮಕ ಚಿತ್ರದಲ್ಲಿ ನಟಿಸಿದ್ದಾರಂತೆ.
ಅರೆಸ್ಟ್ ನಂತರ ವಿಚಾರಣೆ ನಡೆಸಲಾಗಿ, ಚಿತ್ರನಿರ್ಮಾಣ ತಂಡಕ್ಕೆ ಸೇರಿದ ಪ್ರದೀಪ್ ಎಂಬ ವ್ಯಕ್ತಿಯಿಂದ ಕೊಂಡ ಮದ್ಯವನ್ನು ಸಿನಿಮಾರಂಗದ ಅನೇಕ ಗೆಳೆಯರಿಗೆ ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದುದಾಗಿ ರಿಜ್ವಾನ್ ಪೊಲೀಸರಿಗೆ ತಿಳಿಸಿದ್ದಾರಂತೆ. ಈ ಪ್ರಕರಣದ ಕುರಿತು ಟ್ವೀಟ್ ಮಾಡಿರುವ ‘ದ್ರೌಪದಿ’ ಚಿತ್ರದ ನಿರ್ದೇಶಕರು ಈ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದಾರಂತೆ!
ಲಾಕ್‌ಡೌನ್ ಕಾರಣದಿಂದಾಗಿ ಎಣ್ಣೆ ಅಂಗಡಿಗಳು ಬಂದ್ ಆಗಿರುವುದರಿಂದ ಪಾನಪ್ರಿಯರು ಪರ್ಯಾಯ ಮಾರ್ಗಗಳಿಗೆ ಮೊರೆಹೋಗಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಜತೆಗೆ, ಅಕ್ರಮ ಸಾರಾಯಿ/ಕಳ್ಳಬಟ್ಟಿ ದಂಧೆಗಳೂ ವಿವಿಧೆಡೆ ತಲೆಯೆತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಲಾಕ್‌ಡೌನ್ ತೆರವಾದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಒಂದು ಪರಿಹಾರೋಪಾಯ ಸಿಕ್ಕೀತು. ಅಲ್ಲಿಯವರೆಗೂ ಪಾನಪ್ರಿಯರು ಬಾಯಿ ಒಣಗಿಸಿಕೊಂಡೇ ದಿನದೂಡಬೇಕು, ವಿಧಿಯಿಲ್ಲ!