Sunday, July 20, 2025
Homeಕರಾವಳಿತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ; ಸರ್ಕಾರದಿಂದ ಅನುದಾನ ಪಡೆದ ಫಲಾನುಭವಿಗಳ ಸಂಖ್ಯೆ ಪರಿಶೀಲನೆ

ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ; ಸರ್ಕಾರದಿಂದ ಅನುದಾನ ಪಡೆದ ಫಲಾನುಭವಿಗಳ ಸಂಖ್ಯೆ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್‌ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆಯಿತು. ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.

ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು, ಚರ್ಚಿಸಲಾಯಿತು. ಗೃಹಲಕ್ಷ್ಮೀ ಯೋಜನೆಯಡಿ 56355 ಕುಟುಂಬಗಳಿಗೆ ಈವರೆಗೆ 218,36,64,000/- ರೂ, ಗೃಹಜ್ಯೋತಿ ಯೋಜನೆಯಡಿ ಈವರೆಗೆ 69619 ಫಲಾನುಭವಿಗಳಿಗೆ 84,31,92,797/- ರೂ, ಅನ್ನ ಭಾಗ್ಯ ಯೋಜನೆಯಡಿ 45613 ಪಡಿತರ ಚೀಟಿಗೆ ಈವರೆಗೆ 55,49,55,540/-ರೂ, ಯುವನಿಧಿ ಯೋಜನೆಯಡಿ 671 ಫಲಾನುಭವಿಗಳಿಗೆ 1,23,70,500/- ರೂ.ಗಳನ್ನು ಸರ್ಕಾರವು ಮಂಜೂರು ಮಾಡಿದ್ದು, ಶಕ್ತಿ ಯೋಜನೆಯಡಿ ಈವರೆಗೆ  ಧರ್ಮಸ್ಥಳ ಘಟಕದ ಬಸ್ಸುಗಳಲ್ಲಿ 1,49,31,146 ಪ್ರಯಾಣಿಕರು ಪ್ರಯಾಣಿಸಿದ್ದು, 68,28,70,540/-ರೂ. ಬಿಡುಗಡೆಯಾಗಿರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಈವರೆಗೆ ಬೆಳ್ತಂಗಡಿ ತಾಲೂಕಿಗೆ ಒಟ್ಟು 427,70,53,377/- ರೂ.ಗಳ ಅನುದಾನವು ಮಂಜೂರಾಗಿರುವುದಾಗಿ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್‌ ರವರು ಸಭೆಗೆ ತಿಳಿಸಿದರು.

ಲಾಯಿಲ-ಕೊಲ್ಲಿ ಮತ್ತು ಬಜಿರೆ-ಗುಂಡೂರಿ-ಹೊಕ್ಕಾಡಿಗೋಳಿ ರಸ್ತೆಗಳಲ್ಲಿ ಸರ್ಕಾರಿ ಬಸ್ಸು ಸೌಕರ್ಯವನ್ನು ಒದಗಿಸಲು ಮೇಲಾಧಿಕಾರಿಗಳಿಗೆ ಬರಕೊಳ್ಳಲು ಒತ್ತಾಯಿಸಲಾಯಿತು. ಸರಕು ಸೇವಾ ತೆರಿಗೆ ನೋಂದಣಿದಾರರಾಗಿದ್ದು, ತೆರಿಗೆ ಪಾವತಿದಾರರಲ್ಲದವರು ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯ ವಂಚಿತರಾಗಿದ್ದು, ಈ ಬಗ್ಗೆ ಪುನರ್‌ ಪರಿಶೀಲನೆಗಾಗಿ ಸರ್ಕಾರಕ್ಕೆ ಬರಕೊಳ್ಳಲು ತೀರ್ಮಾನಿಸಲಾಯಿತು. ಮನೆಗಳಿಗೆ ಅಪಾಯಕಾರಿಯಾಗಿರುವ ವಿದ್ಯುತ್‌ ಕಂಬ ಮತ್ತು ವಿದ್ಯುತ್‌ ತಂತಿಗಳಿಗೆ ತಾಗಿಕೊಂಡಿರುವ ಮರಗಳ ರೆಂಬೆಗಳನ್ನು ಕೂಡಲೇ ತೆರವುಗೊಳಿಸುವಂತೆ  ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೊರತೆಯಿರುವ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿದ ನಂತರ ವರ್ಗಾವಣೆಗೊಳಿಸುವುದು ಸೂಕ್ತವಾಗಿರುವುದಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಿಸಲಾಯಿತು

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್‌ ಕುಕ್ಕೇಡಿ, ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರು, ಇಲಾಖಾಧಿಕಾರಿಗಳು, ತಾಲೂಕು ಪಂಚಾಯತ್‌ ಅಧೀಕ್ಷಕರಾದ ಡಿ.ಪ್ರಶಾಂತ್‌  ಮತ್ತು ನೋಡೆಲ್‌ ಅಧಿಕಾರಿಯಾದ ಹೆರಾಲ್ಡ್‌ ಸ್ವಿಕ್ವೇರಾ ಉಪಸ್ಥಿತರಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್‌ ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿ, ಧನ್ಯವಾದ ಸಲ್ಲಿಸಿದರು.

- Advertisement -
spot_img

Latest News

error: Content is protected !!