ಅಫ್ಗಾನಿಸ್ತಾನ: ಕುಂದೂಜ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡ ನಂತರ ಅಫ್ಗಾನಿಸ್ತಾನಕ್ಕೆ 2019 ರಲ್ಲಿ ಭಾರತ ಉಡುಗೊರೆಯಾಗಿ ನೀಡಿದ್ದ ನಾಲ್ಕು ದಾಳಿ ಹೆಲಿಕಾಪ್ಟರ್ಗಳಲ್ಲಿ ಒಂದನ್ನು ಉತ್ತರ ಪ್ರಾಂತ್ಯದಲ್ಲಿರುವ ತಾಲಿಬಾನ್ ವಶಪಡಿಸಿಕೊಂಡಿದ್ದು, ಮಿ -24 ದಾಳಿ ಹೆಲಿಕಾಪ್ಟರ್ನ ಪಕ್ಕದಲ್ಲಿ ತಾಲಿಬಾನ್ಗಳು ಪೋಸ್ ನೀಡುತ್ತಿರುವುದು ವರದಿಯಾಗಿದೆ.
ಅಫ್ಘಾನ್ ವಾಯುಪಡೆಗೆ ಭಾರತವು ನಾಲ್ಕು ಮಿ -24 ವಿ ದಾಳಿ ಚಾಪರ್ಗಳನ್ನು ಮತ್ತು ಮೂರು ಚೀತಾ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ಉಡುಗೊರೆಯಾಗಿ ನೀಡಿತ್ತು. ಅಫ್ಘಾನಿಸ್ತಾನ ಮತ್ತು ಬೆಲಾರಸ್ ನಡುವಿನ ಒಪ್ಪಂದದ ಭಾಗವಾಗಿ ದಾಳಿ ಹೆಲಿಕಾಪ್ಟರ್ಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ತಾಲಿಬಾನ್ ಉಗ್ರರು ಭಾನುವಾರ ಕುಂದುಜ್ ರಾಜಧಾನಿ ಪ್ರದೇಶವನ್ನು ವಶಕ್ಕೆ ಪಡೆದಿದ್ದರು.ಉಗ್ರರ ವಿರುದ್ಧ ಸೈನಿಕರು ಹೋರಾಡಿದರೂ, ಬುಧವಾರ ಮಧ್ಯಾಹ್ನದ ವೇಳೆಗೆ ಇಡೀ ನಗರವನ್ನು ಉಗ್ರರು ವಶಕ್ಕೆ ಪಡೆದಿದ್ದರು. ವಿಮಾನ ನಿಲ್ದಾಣದಲ್ಲಿದ್ದ ಸೈನಿಕರು ಉಗ್ರರಿಗೆ ಶರಣಾಗಿದ್ದು, ನಂತರ ತಮ್ಮ ಶಸ್ತ್ರಾಸ್ತ್ರ, ಸೇನಾ ವಾಹನಗಳು ಮತ್ತು ಸಲಕರಣೆಗಳನ್ನು ಉಗ್ರರ ವಶಕ್ಕೆ ನೀಡಿದ್ದಾರೆ.
ಉಗ್ರರು ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆಯುವ ವಿಡಿಯೊವನ್ನು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ನ ಜೋಸೆಫ್ ಡೆಂಪ್ಸಿ ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೊದಲ್ಲಿ ಎಂಐ-24ವಿ ಹೆಲಿಕಾಪ್ಟರ್ನ ದೃಶ್ಯವೂ ಇದೆ.ಹೆಲಿಕಾಪ್ಟರ್ನ ರೋಟರ್ಗಳನ್ನು ಬಿಚ್ಚಿಡಲಾಗಿದೆ. ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸಲು ಬರದೇ ಇರುವ ಕಾರಣ, ಉಗ್ರರು ಅದರ ಬಿಡಿಭಾಗಗಳನ್ನು ಬಿಚ್ಚಿಟ್ಟಿರಬಹುದು ಎಂದು ಹೇಳಲಾಗಿದೆ.
ಕುಂದುಜ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಾಗ ಯಾವೆಲ್ಲಾ ವಸ್ತುಗಳು ದೊರೆತವು ಎಂಬುದರ ಬಗ್ಗೆ ತಾಲಿಬಾನ್ ಮಾಹಿತಿ ನೀಡಿದೆ. ಶಸ್ತ್ರಾಸ್ತ್ರ, ಸೇನಾ ಸಲಕರಣೆಗಳು ಮತ್ತು ವಾಹನಗಳ ಮಾಹಿತಿಯನ್ನು ತಾಲಿಬಾನ್ ಉಗ್ರರು ನೀಡಿದ್ದಾರೆ. ಭಾರತವು ಉಡುಗೊರೆಯಾಗಿ ನೀಡಿದ್ದ ಎಂಐ-24ವಿ ಹೆಲಿಕಾಪ್ಟರ್ನ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೆಲಿಕಾಪ್ಟರ್ನ ಚಿತ್ರವನ್ನು ಬಿಡುಗಡೆ ಮಾಡಿದ್ದಾನೆ.
ತಾಲಿಬಾನಿಗಳ ಬಂಕರ್ ಮೇಲೆ ಜುಲೈ 31ರಂದು ದಾಳಿ ನಡೆಸಲು ಅಫ್ಗನ್ ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ಬಳಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ.
ಅಫ್ಗಾನಿಸ್ತಾನದ ವಿವಿಧೆಡೆ ಸೇವೆಯಲ್ಲಿದ್ದ 50 ಭಾರತೀಯ ಅಧಿಕಾರಿಗಳು ಮತ್ತು ನಾಗರಿಕರನ್ನು ಭಾರತ ಸರ್ಕಾರವು ವಿಶೇಷ ವಿಮಾನದ ಮೂಲಕ ಅವರನ್ನು ಬುಧವಾರ ಬೆಳಗಿನ ಜಾವ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಗಿದೆ.