ಸುಬ್ರಹ್ಮಣ್ಯ: ತಮಿಳುನಾಡಿನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಅಲ್ಲದೇ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ವೇಳೆ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಸ್ವಾಮೀಜಿಗಳ ಬಳಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುತ್ತಾ ಇದ್ದೇನೆ. ಆಶ್ಲೇಷ ನಕ್ಷತ್ರದ ಈ ಪುಣ್ಯದಿನದಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದು ತಮಿಳುನಾಡಿನ ಜನ, ಕರ್ನಾಟಕದ ಜನ ಹಾಗೂ ಇಡೀ ಭಾರತದ ಜನರು ಸುಖ ಶಾಂತಿ ನೆಮ್ಮದಿಯಾಗಿ ಇರಬೇಕು ಹಾಗೂ ಎಲ್ಲಾ ಜನರಿಗೂ ಒಳ್ಳೆದಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.
ಈ ಕ್ಷೇತ್ರವು ಪರಶುರಾಮ ಸೃಷ್ಟಿಯ ಕ್ಷೇತ್ರವಾಗಿದ್ದು, ಸುಮಾರು 5000 ವರ್ಷಗಳ ಇತಿಹಾಸವಿದೆ. ಸಾವಿರಾರು ಭಕ್ತರು ನಂಬಿಕೆಯಿಂದ ಇಲ್ಲಿ ಬಂದು ದೇವರಲ್ಲಿ ಶರಣಾಗುತ್ತಾರೆ. ಈ ಬಾರಿ ಕೂಡ ನಾನು ಸ್ವಾಮೀಜಿಗಳ ಆಶೀರ್ವಾದ ಪಡೆದು ಮನಸ್ಸಿಗೆ ನೆಮ್ಮದಿ ಕಂಡು ವಾಪಸ್ಸಾಗುತ್ತಿದ್ದೇನೆ ಎಂದರು.


