
ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಕೋಡು ಎಂಬಲ್ಲಿ ರವಿವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮತ್ತೊಂದು ಗೋ ಕಳ್ಳತನದ ಘಟನೆ ನಡೆದಿದೆ.
ಇನ್ನೋವಾ ಕಾರಿನಲ್ಲಿ ಬಂದಿದ್ದ ಕಳ್ಳರ ತಂಡವೊಂದು, ಸ್ಥಳೀಯರ ಮೂರರಿಂದ ನಾಲ್ಕು ದನಗಳನ್ನು ಬಲವಂತವಾಗಿ ವಾಹನಕ್ಕೆ ತುಂಬಿಸಿಕೊಂಡು ಪರಾರಿಯಾಗಿದೆ. ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣವೇ ಅದನ್ನು ಬೆನ್ನಟ್ಟಿದ್ದಾರೆ. ಆದರೆ, ಕಳ್ಳರು ಅತೀ ವೇಗವಾಗಿ ವಾಹನ ಚಲಾಯಿಸಿ ಯುವಕರ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರು ಸ್ಥಳದಿಂದ ತಪ್ಪಿಸಿಕೊಂಡಿದ್ದರೂ, ಅವರು ಬಂದಿದ್ದ ಇನ್ನೋವಾ ಕಾರಿನ ನಂಬರ್ ಪ್ಲೇಟ್ ಹಾಗೂ ಕಳ್ಳತನದ ದೃಶ್ಯಗಳು ಸ್ಥಳೀಯ ಯುವಕರ ಮೊಬೈಲ್ ಕ್ಯಾಮೆರಾ ಮತ್ತು ರಸ್ತೆಯಲ್ಲಿದ್ದ ಸಿಸಿಟಿವಿ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಳುವಾದ ಜಾನುವಾರುಗಳನ್ನು ಪತ್ತೆಹಚ್ಚಿಕೊಡಬೇಕೆಂದು ಸ್ಥಳೀಯರು ಆಗುಂಬೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.


