ಧರ್ಮಸ್ಥಳದಿಂದ ಹನ್ನೆರಡು, ಉಜಿರೆಯಿಂದ ಮೂರು ಕಿ.ಮೀ.ದೂರದಲ್ಲಿರುವ ಸುರ್ಯ ದೇವಸ್ಥಾನ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧ. ಪ್ರಕೃತಿ ಸೌಂದರ್ಯದ ಮಧ್ಯ ಕಂಗೊಳಿಸುವ ಈ ದೇಗುಲದಲ್ಲಿ ಸದಾಶಿವ ರುದ್ರನೇ ಮುಖ್ಯ ದೇವರು.
ಭಕ್ತರು ತಮ್ಮ ಬೇಡಿಕೆ ಈಡೇರಿದ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಆಯಾ ರೂಪದ ಮಣ್ಣಿನ ಮೂರ್ತಿಗಳನ್ನು ಒಪ್ಪಿಸಿ ಹರಕೆ ತೀರಿಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಿ ಇಲ್ಲಿ ಭಕ್ತ ಸಮೂಹವೇ ನೆರೆದಿರುತ್ತದೆ.
ಇಲ್ಲಿ ಹರಕೆ ಬನವೊಂದಿದ್ದು ಇಂದಿಗೂ ತನ್ನ ಮೂಲರೂಪವನ್ನು ಉಳಿಸಿಕೊಂಡಿದೆ. ಅದೆಷ್ಟೋ ವರ್ಷಗಳಿಂದ ಭಕ್ತರು ಹಾಕಿದ ಮಣ್ಣಿನ ಮೂರ್ತಿಗಳ ರಾಶಿಯೇ ಇದೆ. ದಿನಂಪ್ರತಿ ಇವುಗಳಿಗೆ ಪೂಜೆ ನಡೆಯುತ್ತದೆ. ಮಳೆಗಾಲದಲ್ಲಿ ಕರಗುವ ಮೂರ್ತಿಗಳು ನೀರಿನೊಂದಿಗೆ ಬೆರೆತು ಮತ್ತೆ ಮಣ್ಣಿಗೆ ಸೇರುತ್ತದೆ. ಇದೀಗ ದೇಗುಲದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ತರಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನ ನಡುವೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಆಗ ಗಾಬರಿಗೊಂಡ ಆ ಮಹಿಳೆ ತನ್ನ ಮಗನನ್ನು “ಓ ಸುರೆಯ” ಎಂದು ಕರೆದಳು ಹಾಗೂ ಆ ಘಟನೆಯ ಬಳಿಕ ಕ್ಷೇತ್ರಕ್ಕೆ ಸುರೆಯ, ಸುರಿಯ, ;ಸುರ್ಯ’ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.
ಅದೇ ರೀತಿ ಆ ಲಿಂಗರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು ಎಂಬುದು ಇಲ್ಲಿನ ಹಿನ್ನೆಲೆ. ಅದೇನೇ ಇದ್ದರೂ ಇಂದು ಸಾವಿರಾರು ಮಂದಿಯ ಅಭೀಷ್ಟಗಳನ್ನು ಈಡೇರಿಸುವ ನೆಚ್ಚಿನ ದೇವಾಲಯವಾಗಿದೆ.