ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಂದಿಗೂ ತಮ್ಮ ಸರಳ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಇಂದೂ ಸಹ ಬೆಳಿಗ್ಗಿನ ವಾಕಿಂಗ್ ಹೋಗಿದ್ದಾಗ ಮನೆ ಮುಂದಿನ ರಸ್ತೆಗಳ ಕಸ ಗುಡಿಸಿ ಮಾದರಿಯಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೊರಟಿದ್ದ ಸಚಿವರಿಗೆ ತಮ್ಮ ರಸ್ತೆ ಕಸ ಶುಚಿ ಮಾಡುವ ಪೌರಕಾರ್ಮಿಕರಾದ ಲಿಂಗಮ್ಮನಿಗೆ ಅನಾರೋಗ್ಯವಾಗಿರುವುದು ತಿಳಿದಿದೆ. ತಕ್ಷಣ ತಾವು ಅವರ ಕಷ್ಟಗಳಿಗೆ ನೆರವಾಗಲೆಂದು ಪತ್ನಿಯೊಂದಿಗೆ ಸೇರಿ ಸ್ವತಃ ಪೊರಕೆ ಹಿಡಿದು ರಸ್ತೆಗಳ ಕಸ ಗುಡಿಸಿದ್ದಾರೆ.ಸಚಿವರ ಮನೆ ಎದುರಿನ ರಸ್ತೆ ಸ್ವಚ್ಚ ಮಾಡುತ್ತಿದ್ದ ಲಿಂಗಮ್ಮನವರ ಕಾಲಿಗೆ ಪೆಟ್ಟಾಗಿತ್ತು.ಈ ವಿಚಾರ ತಿಳಿದ ಸುರೇಶ್ ಕುಮಾರ್ ತಾವು ವಾಕಿಂಗ್ ಅರ್ಧಕ್ಕೆ ನಿಲ್ಲಿಸಿ ಪತ್ನಿಯ ಜತೆಯಾಗಿ ಪೊರಕೆ ಹಿಡಿದು ರಸ್ತೆಗಳ ಕಸ ಸ್ವಚ್ಚ ಮಾಡಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು “ಇಂದು ಬೆಳಿಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು.
“ನಮ್ಮ ರಸ್ತೆಯ ಪೌರಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು.
“ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ.
“(ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ)” ಎಂದಿದ್ದಾರೆ.