Friday, October 11, 2024
Homeಇತರವೈದ್ಯಕೀಯ ಶಿಕ್ಷಣಕ್ಕೆ ನೀಟ್‌ ಮಾತ್ರ ಪ್ರವೇಶ ಪರೀಕ್ಷೆ ; ಸುಪ್ರೀಂ...

ವೈದ್ಯಕೀಯ ಶಿಕ್ಷಣಕ್ಕೆ ನೀಟ್‌ ಮಾತ್ರ ಪ್ರವೇಶ ಪರೀಕ್ಷೆ ; ಸುಪ್ರೀಂ ಕೋರ್ಟ್

spot_img
- Advertisement -
- Advertisement -

ಹೊಸದಿಲ್ಲಿ: ವೈದ್ಯಕೀಯ ಶಿಕ್ಷಣ ಕೋರ್ಸ್‌ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಮಾತ್ರವೇ ಏಕೈಕ ಪ್ರವೇಶ ಪರೀಕ್ಷೆ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಮೂಲಕ ನೀಟ್‌ ಪ್ರವೇಶ ಪರೀಕ್ಷೆ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಹಿನ್ನಡೆ ಆಗಿದೆ. 2012ರಿಂದ ಕೋರ್ಟ್‌ ಮುಂದೆ ಇದ್ದ ಬಹುದೊಡ್ಡ ಗೊಂದಲಕ್ಕೆ ಈ ಮೂಲಕ ತೆರೆಬಿದ್ದಿದೆ.

ಅಲ್ವಸಂಖ್ಯಾಕ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅನುಮತಿ ನೀಡಬೇಕು ಎನ್ನುವ ವಾದವನ್ನು ಈ ಮೂಲಕ ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ಅಲ್ಪಸಂಖ್ಯಾಕ, ಡೀಮ್ಡ್ ವಿ.ವಿ.ಗಳು ಮತ್ತು ಮಿಕ್ಕ ಎಲ್ಲ ಖಾಸಗಿ ಕಾಲೇಜುಗಳು ಏಕರೂಪ ಪ್ರವೇಶ ನಿಯಮಕ್ಕೆ ಬದ್ಧವಾಗಿ ನೀಟ್‌ ಪರೀಕ್ಷೆಯನ್ನು ಆಧರಿಸಿಯೇ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಕಲ್ಪಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಹಕ್ಕುಗಳ ಉಲ್ಲಂಘನೆ ಆಗದು
ಸುಪ್ರೀಂ ಈ ಮಹತ್ವದ ತೀರ್ಪನ್ನು ನೀಡುವ ಸಂದರ್ಭ ಕಲಂ 19 (1) (ಜಿ) ವಿಧಿಯನ್ನು ಉಲ್ಲೇಖೀಸಿದೆ. ಇದರ ಪ್ರಕಾರ ನೀಟ್‌ ಪಾಲನೆಯಿಂದ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳ ಯಾವುದೇ ಕಾನೂನು ಹಕ್ಕುಗಳಿಗೆ ಧಕ್ಕೆ ಆಗುವುದಿಲ್ಲ ಎಂದಿದೆ.

ಶಿಕ್ಷಣವು ಇಂದು ದತ್ತಿ- ದಾನ- ಧರ್ಮಗಳಿಂದ ದೂರ ಉಳಿದಿದ್ದು, ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ವಿನೀತ್‌ ಶರಣ್‌, ಎಂ.ಆರ್‌. ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ವೈದ್ಯಕೀಯ ಶೈಕ್ಷಣಿಕ ವಲಯದಲ್ಲಿರುವ ಭ್ರಷ್ಟಾಚಾರ ತೊಡೆದು ಹಾಕಲು, ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ನೀಟ್‌ ಅನ್ನು ಜಾರಿಗೆ ತರಲಾಗಿದೆ. ನೀಟ್‌ನಲ್ಲಿ ಕೆಲವು ಲೋಪಗಳು ಇರಬಹುದು. ಅವುಗಳನ್ನು ಸರಿಮಾಡುವ ಬಗ್ಗೆ ಚಿಂತಿಸಬೇಕಿದೆ.

ಯಾವುದೇ ವೈದ್ಯಕೀಯ ವಿದ್ಯಾಸಂಸ್ಥೆಗಳು ನೀಟ್‌ ಬರೆದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಸೂಚಿಸಿದೆ. ನೀಟ್‌ನ ಕಾನೂನುಗಳು ಧಾರ್ಮಿಕ ಮತ್ತು ಭಾಷಾ ಸಂಸ್ಥೆಗಳ ಹಕ್ಕುಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

ಮೊದಲು ರಾಷ್ಟ್ರ
ದೇಶವನ್ನು ಕಟ್ಟುವುದೇ ಶಿಕ್ಷಣದ ಮೂಲ ಉದ್ದೇಶ. ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ಮತ್ತು ಕಡೆಗಣನೆ ಸಲ್ಲದು. ಶಿಕ್ಷಣ ಸಂಸ್ಥೆಗಳು ಮೊದಲು ರಾಷ್ಟ್ರೀಯ ಹಿತಾಸಕ್ತಿಯನ್ನು ಪೂರೈಸಬೇಕು. ಅನಂತರ ಸ್ವಹಿತಾಸಕ್ತಿಗೆ ಆದ್ಯತೆ ನೀಡಬೇಕು. ವೃತ್ತಿಪರ ಶಿಕ್ಷಣದಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರ್ಟ್‌ ಹೇಳಿದೆ.

8 ವರ್ಷಗಳ ತಲೆನೋವು
ನೀಟ್‌ನ ಏಕರೂಪ ಪ್ರವೇಶ ಪ್ರಶ್ನಿಸಿ ಆಂಧ್ರಪ್ರದೇಶ ಮತ್ತು ತಮಿಳುನಾಡು 2012ರಲ್ಲಿಯೇ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದವು. ಅದೇ ವರ್ಷ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ ಮತ್ತು ಡೆಂಟಲ್‌ ಕೌನ್ಸಿಲ್‌ ಆಫ್ ಇಂಡಿಯಾ ಕೂಡ ನೀಟ್‌ನ ಸಿಂಧುತ್ವವನ್ನು ಪ್ರಶ್ನಿಸಿದ್ದವು.

ಪ್ರತಿ ಸಂಸ್ಥೆಯೂ ಒಂದೊಂದು ರೀತಿಯಲ್ಲಿ ಪ್ರವೇಶ ಪರೀಕ್ಷೆ ನಡೆಸುತ್ತಾ ಹೋದರೆ ಅದು ರಾಷ್ಟ್ರೀಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದಂತೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಆಗಿನಿಂದಲೂ ಹೇಳುತ್ತಲೇ ಬಂದಿತ್ತು.

ನೀಟ್‌ ಪ್ರಶ್ನಿಸಿದ್ದು ಯಾರು?
ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜ್‌ ಅಸೋಸಿಯೇಶನ್‌, ಎ.ಪಿ. ಪ್ರೈವೇಟ್‌ ಮೆಡಿಕಲ್‌ ಮತ್ತು ಡೆಂಟಲ್‌ ಕಾಲೇಜ್‌ ಅಸೋಸಿಯೇಶನ್‌, ಅಣ್ಣಾಮಲೈ ವಿ.ವಿ., ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಕಾಲೇಜ್‌, ಕೇರಳ ಪ್ರೈವೇಟ್‌ ಮೆಡಿಕಲ್‌ ಕಾಲೇಜ್‌, ಎಜುಕೇಟ್‌ ಚಾರಿಟೆಬಲ್‌ ಟ್ರಸ್ಟ್‌, ತಮಿಳುನಾಡು ಡೀಮ್ಡ್ ವಿ.ವಿ. ಅಸೋಸಿಯೇಶನ್‌, ದಾರುಸ್‌ ಸಲಾಂ ಎಜುಕೇಶನ್‌ ಟ್ರಸ್ಟ್‌ ನೀಟ್‌ ಪ್ರವೇಶ ಪರೀಕ್ಷೆಯನ್ನು ಪ್ರಶ್ನಿಸಿದ್ದವು.

- Advertisement -
spot_img

Latest News

error: Content is protected !!